ಉಡುಪಿ, ಆ 24 (DaijiwroldNews/HR): ಉಡುಪಿ ಜಿಲ್ಲಾ ಪೊಲೀಸರು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಒಟ್ಟು 40 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.
ಆಗಸ್ಟ್ 20ರಂದು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಪು ಬಳಿ ವಿನಯ ನಗರದ ಮುಸ್ತಾಫ್(30), ಅಶ್ರಫ್(35), ಉಡುಪಿ ನಗರ ಠಾಣಾ ವ್ಯಾಪ್ತಿಯ ಕುತ್ಪಾಡಿ ಗ್ರಾಮದ ಅನಂತಕೃಷ್ಣ ನಗರದ ಬಳಿ ಸ್ಥಳೀಯ ನಿವಾಸಿ ಇರ್ಷಾದ್ ಖಾನ್(32), ನಗರದ ಬೋರ್ಡ್ ಹೈಸ್ಕೂಲ್ ಬಳಿ ಶಿರಿಬೀಡುವಿನ ಶರ್ವೀನ್ (20), ಕುಂಜಿಬೆಟ್ಟು ಎಂಜಿಎಂ ಕಾಲೇಜು ಎದುರು ಮಾರ್ಪಳ್ಳಿಯ ಸಮೀದ್ (20) ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಆಗಸ್ಟ್ 21ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಜಂಕ್ಷನ್ ಬಳಿ ರೋಬನ್ ಡಿ’ಅಲ್ಮೇಡಾ(21), ಉಡುಪಿ ಸೆನ್ ಪೊಲೀಸರು ಕಾರ್ಕಳ ರಾಮಸಮುದ್ರ ಕೆರೆಯ ಬಳಿ ಮಟಾ³ಡಿ ಗ್ರಾಮದ ಯೋಗೀಶ್ ಗಾಣಿಗ(25), ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೇಯಸ್(20), ಕೊಪ್ಪ ತಾಲೂಕಿನ ನಂದೀಶ್(22) ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರಾಂತ್ಯದಲ್ಲಿ ಮಾದಕ ದ್ರವ್ಯದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಈ ಸಂಬಂಧ ಒಟ್ಟು 40 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರವಾಸಿ ತಾಣಗಳು, ಶಿಕ್ಷಣ ಸಂಸ್ಥೆಗಳ ಪರಿಸರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಿಯಾಗಿ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದಿದ್ದಾರೆ.