ಕಾರ್ಕಳ, ಆ 24 (DaijiworldNews/MS): ಮಹಿಳೆಯೊಬ್ಬರ ಮಾನಹಾನಿಗೈದು ಕೊಡಲಿಯಿಂದ ಹಲ್ಲೆಗೈದ ಪ್ರಕರಣದ ಆರೋಪಿಯೋರ್ವನಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
೨೦೨೧ ನವಂಬರ್ ೨೩ರಂದು ಸಾಣೂರು ಗ್ರಾಮದ ಇಂದಿರಾ ನಗರದ ದರ್ಖಾಸು ಮನೆಯಲ್ಲಿ ಈ ಘಟನೆ ನಡೆದಿತ್ತು. ತನ್ನ ಮನೆಯ ಜಗುಲಿಯಲ್ಲಿ ಸಂಪಾ ಕುಳಿತ್ತಿದ್ದ ಸಂದರ್ಭದಲ್ಲಿ ಆರೋಪಿ ಉಮೇಶ ಎಂಬಾತ ಪೊರಕೆ ಹಿಡಿದು ಚಂಪಾ ಅವರ ಹಿತ್ತಲಿಗೆ ಅಕ್ರಮವಾಗಿ ಪ್ರವೇಶಗೈದಿದ್ದನು. ಹಿತ್ತಲಿನಲ್ಲಿದ್ದ ಸಾಗುವಾನಿ ಮರವನ್ನು ಕಡಿಯಬೇಕೆಂದು ಆರೋಪಿ ಉಮೇಶ್ ಪಟ್ಟು ಹಿಡಿದಾಗ ಸಂಪಾ ಅಕ್ಷೇಪ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ ತನ್ನ ಮನೆಗೆ ಹಿಂತಿರುಗಿ ಕೊಡಲಿಯನ್ನು ಹಿಡಿದುಕೊಂಡು ಬಂದು ಸಂಪಾ ಅವರಿಗೆ ಹೊಡೆಯಲು ಹೋಗಿದ್ದನು. ಘಟನೆಯ ತೀವ್ರತೆಯನ್ನು ಅರಿತುಕೊಂಡು ತಪ್ಪಿಸಿಕೊಂಡಾಗ ಕೊಡಲಿಯು ಸಂಪಾ ಅವರ ಬಲಕಿವಿ ಮತ್ತುಬಲಭುಜಕ್ಕೆ ತಾಗಿ ಸಾದಾ ಸ್ವರೂಪದಲ್ಲಿ ಗಾಯಗಳಾಗಿದ್ದವು. ಆ ವೇಳೆಗೆ ಸಂಪಾ ಅವರನ್ನು ಉದ್ದೇಶಿಸಿ ನಿಮ್ಮನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ತನ್ನಲ್ಲಿದ್ದ ಕೊಡಲಿಯನ್ನು ಎಸೆದು ಪರಾರಿಯಾಗಿದ್ದನು.
ಈ ಬಗ್ಗೆ ಅಂದು ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿತ್ತು. ಮುಖ್ಯ ಪೇದೆಗಳಾದ ಸದಾಶಿವ ಶೆಟ್ಟಿ ಹಾಗೂ ಮೂರ್ತಿ ಕೆ. ಇವರುಗಳು ಆರಂಭಿಕ ತನಿಖೆ ಪೊರೈಸಿ, ಮುಂದಿನ ತನಿಖೆಯನ್ನು ಪಿಎಸ್ಐ ದಾಮೋದರ ಕೆ.ಬಿ. ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಚೇತನಾ ಎಸ್.ಎಫ್ ಅವರು ಪ್ರಕರಣದ ವಾದ-ಪ್ರತಿವಾದ ಆಲಿಸಿ ಆರೋಪಿ ಉಮೇಶ್ ಅಪರಾಧಿ ಎಂದು ಘೋಷಿಸಿಸಿದ್ದಾರೆ. 1.6 ವರ್ಷ ಸಾದಾ ಕಾರಗೃಹ ವಾಸ, ರೂ.3 ಸಾವಿರ ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರಿ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಅವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.