ಕುಂದಾಪುರ, ಫೆ 02(SM): ಫೆಬ್ರವರಿ 02 ಆ ಬಾಲಕನ ಹುಟ್ಟಿದ ದಿನ. ಸರಿಯಾಗಿ ನಾಲ್ಕು ವರ್ಷ. ಸಂಜೆ ಮನೆಯಲ್ಲಿ ಹುಟ್ಟಿದ ಹಬ್ಬದ ಆಚರಣೆಗೆ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹುಟ್ಟಿದ ದಿನವೇ ಆ ಬಾಲಕ ಇಹಲೋಕ ತ್ಯಜಿಸಿದ್ದಾನೆ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಕೊಂಟೇಹೊಳೆ ನಿವಾಸಿ ರಾಘವೇಂದ್ರ ಹಾಗೂ ಪವಿತ್ರ ದಂಪತಿಯ ಮಗ ಅಂಶಿಕ್(4) ಮೃತಪಟ್ಟ ಬಾಲಕ.
ಕೋಣಂದೂರಿನಿಂದ ವಂಡಾರು ಸಮೀಪದ ಸಂಬಂಧಿಕರ ಮದುವೆಗೆ ರಾಘವೇಂದ್ರ, ಪತ್ನಿ ಪವಿತ್ರ, ಇಬ್ಬರು ಗಂಡು ಮಕ್ಕಳಾದ ಅನ್ವಿತ್(7) ಹಾಗೂ ಅಂಶಿಕ್(4)ರೊಂದಿಗೆ ಶುಕ್ರವಾರ ಊರಿಗೆ ಬಂದಿದ್ದರು. ಮದುವೆ ಹಾಗೂ ಶನಿವಾರ ನಡೆದ ಅರತಕ್ಷತೆ ಮುಗಿಸಿಕೊಂಡು, ಮದುವೆಯ ವಾಹನದಲ್ಲಿ ಸಂಬಂಧಿಕರ ಇನ್ನೊಂದು ಮನೆಯಾದ ಗೋಳಿಯಂಗಡಿ ಜನತಾ ಕಾಲೋನಿಗೆ ಹೋಗಲು ಇಬ್ಬರು ಮಕ್ಕಳೊಂದಿಗೆ ಮದುವೆ ವಾಹನದಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದರು.
ಇದೇ ಸಂದರ್ಭ ಸಾಗರ ಹಾಲಾಡಿ ಮಾರ್ಗವಾಗಿ ಬೆಳ್ತಂಗಡಿಗೆ ಜೋಳ ಸಾಗಿಸುತ್ತಿದ್ದ ಟಾಟಾ ಗೂಡ್ಸ್ ವಾಹನ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಹುಟ್ಟಿದ ದಿನದಂದೇ ಸಾವು:
ಅಂಶಿಕ್ ಫೆ. 2ರಂದು ಹುಟ್ಟಿದ್ದು, ಅದೇ ದಿನ ಸಾವು ಸಂಭವಿಸಿದೆ. ೪ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಬೆಳಗ್ಗೆ ಶ್ರೀ ಕ್ಷೇತ್ರ ಮಂದಾರ್ತಿ ದೇಗುಲಕ್ಕೆ ಹೋಗಿ ದೇವರ ದರ್ಶನ ಪಡೆದು, ಅನಂತರ ಸಂಬಂಧಿಕರ ಮದುವೆಯ ಅರತಕ್ಷತೆಯಲ್ಲಿ ಪಾಲ್ಗೊಂಡಿದರು. ಆದರೆ ವಿಧಿಯ ಕ್ರೂರ ಲೀಲೆಗೆ ಹುಟ್ಟಿದ ದಿನದಂದೆ ಸಾವು ಸಂಭವಿಸಿದೆ.
ಘಟನೆಯ ಕುರಿತಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.