ಸುಳ್ಯ, ಆ 23 (DaijiworldNews/SM): ಹರಿಹರ ಪಲ್ಲತ್ತಡ್ಕದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಲ್ಮಕಾರಿನ ವೆಂಕಪ್ಪ ಗೌಡ ಎಂಬವರ ಪುತ್ರ ಚಂದ್ರಶೇಖರ್ ನಂಗಾರು(35) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ತನ್ನ ಬೈಕ್ ನಲ್ಲಿ ಸ್ನೇಹಿತನೊಂದಿಗೆ ಸುಳ್ಯಕ್ಕೆ ಬಂದು ವಾಪಸ್ ಮನೆಗೆ ಹೋಗುತ್ತಿದ್ದಾಗ ಹರಿಹರ ಪಲ್ಲತಡ್ಕದ ಶಾಲಾ ಬಳಿ ಎದುರಿನಿಂದ ತೆಂಗಿನಕಾಯಿ ಹೇರಿಕೊಂಡು ಬರುತ್ತಿದ್ದ ಲಾರಿಯನ್ನು ನೋಡಿ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರರಾಗಿ ಕುಳಿತಿದ್ದ ಚಂದ್ರಶೇಖರರು ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಗಾಯಗೊಂಡಿದ್ದರು . ಅವರನ್ನು ತಕ್ಷಣ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಕೋಮ ಸ್ಥಿತಿಗೆ ತಲುಪಿದ್ದರಿಂದ ಅಲ್ಲಿ ಪರೀಕ್ಷಿಸಿದ ವೈದ್ಯರು ಪುನಃ ಅವರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು . ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ .