ಉಡುಪಿ, ಆ 23 (DaijiworldNews/SM): ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕವಾಗಿದ್ದರೂ, ಜನಸಂಖ್ಯೆಯಲ್ಲಿ ದೊಡ್ಡದಾಗಿದೆ. ಯುವ ಜನಾಂಗವು ಉದ್ಯೋಗವನ್ನು ಅರಸಿ ಪರ ಊರು-ದೇಶಗಳಿಗೆ ತೆರಳುವ ಬದಲು ಸ್ವಂತ ಊರಲ್ಲಿಯೇ ಉದ್ಯೋಗ ಪಡೆಯುವಂತಾಗಲು ಸಾಫ್ಟ್ವೇರ್ ಉದ್ದಿಮೆಗಳ ಅವಶ್ಯಕತೆ ಇದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಇಂದು ನಗರದ ಐ.ಎಮ್.ಎ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯು 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರ್ಯಯ ಜಿಲ್ಲೆಯಾಗಿ ಮಾರ್ಪಾಡುಗೊಂಡಿದ್ದು, ಆ ಸಮಯದಲ್ಲಿ ಜಿಲ್ಲೆಯ ಮೊದಲ ಉಸ್ತುವಾರಿ ಸಚಿವರಾಗಿದ್ದು, ನನಗೆ ಹೆಮ್ಮೆಯ ವಿಷಯ. ಅಂದಿನಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಪರ ಚಟುವಟಿಕೆಗಳು ನಡೆದಿದ್ದು, ಮುಂದೆಯೂ ಕೂಡ ಅನೇಕ ಅಭಿವೃದ್ಧಿ ಪಥದ ಕೆಲಸಗಳು ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕರಾವಳಿ ಪ್ರವಾಸೋದ್ಯಮ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು. ಹಾಗೆಯೇ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಹೊಂದಿದ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ. ಅದರ ಜೊತೆಗೆ ಸರಕಾರಿ ಆಸ್ಪತ್ರೆಗಳನ್ನು ನವೀಕರಿಸುವುದರಿಂದ ಬಡ ವರ್ಗದವರಿಗೆ ಹಾಗೂ ತುರ್ತು ಪರಿಸ್ಥಿತಿಯಲ್ಲಿಯೂ ಸಹ ಅನುಕೂಲವಾಗುತ್ತದೆ ಎಂದರು.
ಜನರು ತಮ್ಮ ಕೆಲಸಗಳಿಗೆ ಕಚೇರಿಯಿಂದ ಕಚೇರಿಗೆ ಮೈಲು ಗಟ್ಟಲೆ ಅಲೆಯುವ ಬದಲು ಸರಕಾರವೇ ಜನರ ಬಳಿ ಬರುವಂತಾಗಬೇಕು. ಆದ್ದರಿಂದ ಜಿಲ್ಲೆಯಲ್ಲಿ ಎರಡು ಅಥವಾ ಮೂರು ಉಪವಿಭಾಗಾಧಿಕಾರಿಗಳ ಕಚೇರಿ ನಿರ್ಮಾಣವಾಗಬೇಕು ಎಂದು ಹೇಳಿದರು.
ಕೃಷಿಯಲ್ಲಿ ಈಗಾಗಲೇ ಬೆಳವಣಿಗೆಯಾಗಿದ್ದು, ಮುಂದೆಯೂ ಕೂಡ ಜನರು ಕೃಷಿಗೆ ಬೆಂಬಲ ನೀಡಬೇಕು. ಜಿಲ್ಲೆಯಲ್ಲಿ ಉಡಾನ್ ಯೋಜನೆಯನ್ನು ಅನಾವರಣಗೊಳಿಸುವ ದೃಷ್ಠಿಕೋನವಿದ್ದು, ಜನರಿಗೆ ಉದ್ಯೋಗ ನೀಡುವುದು ಹಾಗೂ ಸಂಚಾರ ಅವಧಿಯನ್ನು ಮಿತಿಗೊಳಿಸುವುದು ಇದರ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ 1997 ರಲ್ಲಿ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಡಾ. ಕಲ್ಪನಾ ಗೋಪಾಲನ್ ಅವರೊಂದಿಗೆ ವರ್ಚುವಲ್ ಸಂವಾದ ನಡೆಯಿತು.