ಕುಂದಾಪುರ, ಫೆ 02(SM): ಕಳೆದ ಹಲವು ದಿನಗಳಿಂದ ಸರ್ವಿಸ್ ರಸ್ತೆಯನ್ನು ಅಗೆದು ಜಲ್ಲಿ ಹಾಕಿ ಹಾಗೆಯೇ ಬಿಟ್ಟು ನಾಪತ್ತೆಯಾಗಿದ್ದ ನವಯುಗ ಕಂಪನಿ ವಿರುದ್ದ ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಹರಿಹಾಯ್ದ ಘಟನೆ ಶನಿವಾರ ಬೀಜಾಡಿಯಲ್ಲಿ ನಡೆದಿದೆ.
ಸ್ಥಳೀಯರ ದೂರಿನ ಮೇರೆಗೆ ನವಯುಗ ಕಂಪನಿ ತಂಡವನ್ನು ಕರೆದುಕೊಂಡು ಬಂದ ಜಿಲ್ಲಾಧಿಕಾರಿ ಬೀಜಾಡಿ ಸರ್ವೀಸ್ ರೋಡ್ ಯು ಟರ್ನ್ ನಿಂದ ಬೀಜಾಡಿ ಜಂಕ್ಷನ್ ತಿರುವು ತನಕ ಕಾಲ್ನಡಿಗೆಯಲ್ಲಿ ತೆರಳಿ ಸ್ವತಃ ಪರಿಶೀಲನೆ ನಡೆಸಿ ಕಂಪನಿ ಇಂಜಿನಿಯರ್ ಗಳನ್ನು ತೀವ್ರ ತರಾಟೆಗೆ ತೆಗೆದು ಕೊಂಡರು.
ದಿನವಿಡಿ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಯೋವೃದ್ಧ ಸೇರಿದಂತೆ ಸ್ಥಳೀಯರು ಓಡಾಡುವುದು ಹೇಗೆ? ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಯಾವುದೇ ಸೇಪ್ ಗಾರ್ಡ್ ಗಳಿಲ್ಲ. ಇಷ್ಟೊಂದು ಅಪಾಯಕಾರಿ ಇರುವಾಗ ನಿಮಗಿನ್ನೂ ಕಾಲವಾಕಾಶ ಕೊಡುವ ಪ್ರಶ್ನೆಯೇ ಇಲ್ಲ. ಸೋಮವಾರದಂದು ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ಕಂಪನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಿ ಕಾನೂನಾತ್ಮಕ ಕೇಸುಗಳನ್ನು ದಾಖಲಿಸುವುದರ ಮೂಲಕ ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಅದೇಶ ನೀಡಿದ್ದಾರೆ.
ಡಿಸಿ ಸ್ಥಳಕ್ಕೆ ಬೇಟಿ ಕೊಟ್ಟಾಗ ಸ್ಥಳೀಯರು ನವಯುಗ ಕಂಪನಿ ಇಂಜಿಯರ್ಗಳನ್ನು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಸ್ಯಾಮ್ ಸನ್ ರನ್ನು ತರಾಟೆಗೆ ತೆಗೆದುಕೊಂಡರು.