ಮಂಗಳೂರು,ಆ 23 (DaijiworldNews/MS):ಪಂಚ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ತುಳು ಭಾಷೆಯ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಯುವ ಸಮುದಾಯ ಅರ್ಥೈಸಿಕೊಳ್ಳಬೇಕು ಎಂದು ಚಂದ್ರಹಾಸ ಕಣಂತೂರು ಹೇಳಿದರು.
ಅವರು ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಜಾನಪದ ಸಾಂಸ್ಕೃತಿಕ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಆಯೋಜಿಸಲಾದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಸಂಸ್ಕೃತಿಯ ಹಿನ್ನೆಲೆ ಇರುವ ತುಳುವರು ಪ್ರಕೃತಿಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು ಅದಕ್ಕನುಗುಣವಾದ ತಿಂಗಳುಗಳ ವ್ಯವಸ್ಥೆಯನ್ನು ಮಾಡಿಕೊಳ್ಳುವ ಮೂಲಕ ವಾರ್ಷಿಕ ಆವರ್ತನ ಆಚರಣೆಗಳನ್ನು ಅರ್ಥಪೂರ್ಣವಾಗಿ ಪಾಲಿಸುತ್ತಿರುವರು. ತುಳುವರ ನಂಬಿಕೆ ಆಚರಣೆಗಳ ಹಿಂದಿರುವ ತಾತ್ವಿಕತೆಯನ್ನು, ಸೂಕ್ಷ್ಮ ಪ್ರಜ್ಞೆಯನ್ನು, ತುಳು ಗಾದೆ, ಒಗಟುಗಳ ಒಳಾರ್ಥವನ್ನು ಇಂದಿನ ಯುವಪೀಳಿಗೆ ಅರಿತುಕೊಳ್ಳಬೇಕು ಎಂದು ನುಡಿದರು.
ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮತ್ತು ಕಾಲೇಜಿನ ಸಂಚಾಲಕರಾದ ಡಾ| ಮಂಜುಳಾ ಕೆ.ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ| ಸತೀಶ್ ಕುಮಾರ್ ಶೆಟ್ಟಿ ಪಿ. ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಜಾನಪದ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪ್ರೊ. ಹೇಮಲತಾ, ಡಾ| ಸತೀಶ್ ಕೆ. ರವಿರಾಜ್ ಎಸ್, ಸ್ವಾತಿ ಎಂ. ಕಾರ್ಯದರ್ಶಿ ವರ್ಸನಾ ಶೆಟ್ ಮತ್ತಿತ್ತರು ಉಪಸ್ಥಿತರಿದ್ದರು.
ಆಟಿಡೊಂಜಿ ದಿನ ಕಾರ್ಯಕ್ರಮದ ಭಾಗವಾಗಿ ತುಳುನಾಡಿನ ಸಂಪ್ರದಾಯದ ಖಾದ್ಯಗಳನ್ನು ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಯಿತು. 7 ತಂಡ ಭಾಗವಹಿಸಿದ್ದು 60ಕ್ಕಿಂತ ಹೆಚ್ಚು ಖಾದ್ಯಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು. III (2nd Batch) ಬಿ.ಕಾಂ ಪ್ರಥಮ ಬಹುಮಾನ ಮತ್ತು II (1st & 3rd Batch) ಬಿ.ಕಾಂ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ನೀಡಲಾಯಿತು.