ಸುಬ್ರಹ್ಮಣ್ಯ, ಫೆ 02(SM): ಬಿಜೆಪಿಯು ಯಾವುದೇ ಶಾಸಕರನ್ನು ಸೆಳೆಯುವಂತಹ ಕಾರ್ಯವನ್ನು ಮಾಡುತ್ತಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರೊಳಗೆ ಸಾಕಷ್ಟು ಗುಂಪುಗಳಾಗಿ ಚದುರಿ ಹೋಗಿದ್ದಾರೆ. ಆಡಳಿತ ಪಕ್ಷದ ಶಾಸಕರೊಳಗೆ ಹೊಂದಾಣಿಕೆ ಇಲ್ಲ. ಒಳಗೊಳಗೆ ಕಚ್ಚಾಡುತ್ತಾ ಅನೇಕ ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ. ಆಡಳಿತ ಪಕ್ಷದ ಶಾಸಕರು ಅಸಮಾಧಾನಗೊಂಡು ತಮ್ಮೊಳಗೆ ಗುಂಪು ಮಾಡಿಕೊಂಡಿದ್ದಾರೆ. ಅಲ್ಲದೆ ಅತೃಪ್ತ ಶಾಸಕರು ತಾವೇ ಸರಕಾರದಿಂದ ಹೊರಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಅವರ ಸರಕಾರವನ್ನು ಅವರೇ ಬೀಳಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಅವರು ಶನಿವಾರ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸೇವಾಧಿಗಳನ್ನು ನೆರವೇರಿಸಿದರು. ಶುಕ್ರವಾರ ರಾತ್ರಿ ಕ್ಷೇತ್ರಕ್ಕೆ ಆಗಮಿಸಿದ ಅವರು ಶನಿವಾರ ಮುಂಜಾನೆ ಪುಣ್ಯ ನದಿ ಕುಮಾರಧಾರದಲ್ಲಿ ಸ್ನಾನ ಮಾಡಿ ಶ್ರೀ ದೇವಳಕ್ಕೆ ಆಗಮಿಸಿ ಸಂಕಲ್ಪ ನೆರವೇರಿಸಿದರು.ಬಳಿಕ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಮಹಾಪೂಜೆ ಮತ್ತು ನಾಗಪ್ರತಿಷ್ಠೆ ಸೇವೆ ನೆರವೇರಿಸಿದರು. ಬಳಿಕ ಶ್ರೀ ದೇವರ ಮಹಾಪೂಜೆಯನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು.
ಸರಕಾರ ಬೀಳುವ ಭಯದಿಂದ ಆಡಳಿತ ಪಕ್ಷದ ಕೆಲವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ನಾವು ಯಾವುದೇ ರೀತಿಯಲ್ಲಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ ಎಂದರು.
ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಬಿಜೆಪಿ ಶಾಸಕರೆಲ್ಲರೂ ದೇಹಲಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದೆವು. ಬಳಿಕ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿಕೊಂಡರು. ಅಲ್ಲಿ ಶಾಸಕರುಗಳು ಕುಡಿದ ಅಮಲಿನಲ್ಲಿ ಹೊಡೆದಾಟ ಮಾಡಿಕೊಂಡರು. ಇದೀಗ ಕಾಂಗ್ರೆಸ್ನಲ್ಲಿ ನಾಲ್ಕೈದು ಗುಂಪುಗಳಾಗಿ ಅಸಮಾಧಾನ ಭುಗಿಲೆದ್ದಿದೆ. ಆಡಳಿತ ಪಕ್ಷದ ಅತೃಪ್ತ ಶಾಸಕರೇ ಸ್ವತಾಃ ಸಮ್ಮಿಶ್ರ ಸರಕಾರವನ್ನು ಬೀಳಿಸುತ್ತಾರೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು.