ಸುಬ್ರಹ್ಮಣ್ಯ, ಆ 23 (DaijiworldNews/MS): ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸ್ನಾನಘಟ್ಟ ಬಳಿ ಭಾನುವಾರ ಸ್ನಾನಕ್ಕಿಳಿದಿದ್ದ ಬೆಂಗಳೂರು ನಿವಾಸಿ ಶಿವು ಕಣ್ಮರೆಯಾಗಿದ್ದು , ಸೋಮವಾರವೂ ಹುಡುಕಾಟ ಮುಂದುವರಿದಿದ್ದು, ಯಾವುದೇ ಸುಳಿವು ಪತ್ತೆಯಾಗಿಲ್ಲ.
ಸುಮಾರು 21ಜನರ ತಂಡದೊಂದಿಗೆ ಬೆಂಗಳೂರಿನ ಕುಕ್ಕೆಗೆ ಬಂದಿದ್ದ ಶಿವು ಎಚ್ಚರಿಕೆ ನಿರ್ಲಕ್ಷಿಸಿ ಸ್ನಾನ ಘಟ್ಟದ ಬಳಿ ನೀರಿಗೆ ಹಾರಿದ್ದು ಬಳಿಕ ಕಾಣೆಯಾಗಿದ್ದ.
ಸುಮಾರು 15 ಜನ ನುರಿತ ಗುಂಡ್ಯದ ಈಜುಗಾರರು, ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು, ಗೃಹರಕ್ಷಕ ದಳ,ಸ್ಥಳೀಯ ಜನನಾಯಕರು ಹಾಗೂ ಸ್ಥಳೀಯರು ಸೇರಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಸುತ್ತಮುತ್ತ 12ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಸೋಮವಾರ ನಿರಂತರ ಮಳೆ ಹಾಗೂ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಹಾಗೂ ನೀರಿನ ಬಣ್ಣ ಕಂದು ಬಣ್ಣಕ್ಕೆ ತಿರುಗಿದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಮಂಗಳವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.