ಬೈಂದೂರು, ಆ 22 (DaijiworldNews/HR): ಬೈಂದೂರು ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಅಧಿಕಾರಕ್ಕೆ ಬಂದ ಬಳಿಕ ಸರ್ವತೋಮುಖ ಅಭಿವೃದ್ದಿ ಕಂಡಿದೆ. ದಾಖಲೆಯ ಅನುದಾನದ ಮೂಲಕ ಮಾದರಿ ಕ್ಷೇತ್ರವಾಗಿ ಮೂಡಿಬರುತ್ತಿದೆ. ಸುಸಜ್ಜಿತ ತಾಲೂಕು ಕಛೇರಿ ಕಟ್ಟಡ ಸೇರಿದಂತೆ ವಿವಿಧ ಮಹತ್ವಕಾಂಕ್ಷಿ ಯೋಜನೆಗಳು ಪ್ರಗತಿಯಲ್ಲಿವೆ. ಕ್ಷೇತ್ರದಲ್ಲಿ ಎಲ್ಲ ಇಲಾಖೆಗಳು ಪಾರದರ್ಶಕ ಸೇವೆ, ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಸರ್ಕಾರ ಹಾಗೂ ಪಕ್ಷ ನಿಗಾ ವಹಿಸುತ್ತಿದೆ ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಣಬಲ, ಅಧಿಕಾರ, ದಬ್ಬಾಳಿಕೆ ಮತ್ತು ನಕಲಿ ದಾಖಲೆ ಮೂಲಕ ಭೂಕಬಳಿಕೆ, ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದ್ದು, ಕೆಲವೊಂದು ವ್ಯಕ್ತಿಗಳು ಕಾನೂನನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವ ಬಗ್ಗೆಯೂ ಮಾಹಿತಿ ಬಂದಿದೆ. ಇಂತಹ ವಿಚಾರಗಳನ್ನು ಶಾಸಕರು ಗಂಭೀರವಾಗಿ ಪರಿಗಣಿಸಿದ್ದು, ಕ್ಷೇತ್ರದಲ್ಲಿ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಯಾವ ದಬ್ಬಾಳಿಕೆ, ವಂಚನೆಗಳಿಗೆ ಒಳಗಾಗಬಾರದು, ಈ ರೀತಿ ಗ್ರಾಮೀಣ ಭಾಗದಲ್ಲಿ ಜನಸಾಮನ್ಯರಿಗೆ ನಕಲಿ ದಾಖಲೆ ಅಥವಾ ಒತ್ತಡಗಳ ಮೂಲಕ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದರೆ ಪಕ್ಷ ಅದನ್ನು ಸಹಿಸುವುದಿಲ್ಲ. ಮತ್ತು ಭಾರತೀಯ ಜನತಾ ಪಕ್ಷ ಸದಾ ಜನರೊಂದಿಗೆ ಇರುತ್ತದೆ ಎಂದು ಹೇಳಿದರು.
ಭೂಕಬಳಕೆ, ದಾಖಲೆ ತಿರುಚುವುದು ಇತ್ಯಾದಿಗಳು ಗಮನಕ್ಕೆ ಬಂದರೆ ತಕ್ಷಣ ದಾಖಲೆಗಳೊಂದಿಗೆ ಭಾರತೀಯ ಜನತಾ ಪಕ್ಷದ ಬೈಂದೂರು ಕಛೇರಿಯನ್ನು ಸಂಪರ್ಕಿಸಬಹುದು. ಅಂತಹವರಿಗೆ ಯಾವುದೇ ಖರ್ಚು ಭರಿಸದೇ ಕಾನೂನು ನೆರವು ಒದಗಿಸಲಾಗುವುದು. ಭೂಮಾಲಕರ ಮೇಲೆ ಅಮಿಷವೊಡ್ಡಿ ಇವತ್ತು ಪಟ್ಟಭದ್ರ ಹಿತಾಸಕ್ತಿಗಳು ತಾಲೂಕು ಕಛೇರಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರುಗಳು ಬರುತ್ತಿವೆ. ಶೀಘ್ರ ಜಿಲ್ಲಾಧಿಕಾರಿಗಳು, ಶಾಸಕರ ಉಪಸ್ಥಿತಿಯಲ್ಲಿ ಇಲ್ಲಿ ವಿಶೇಷ ಸಭೆ ನಡೆಸಲು ಮನವಿ ಮಾಡಲಾಗುವುದು. ಜನರು ಯಾವುದೇ ಕಾರಣಕ್ಕೂ ಭಯಗೊಳ್ಳುವ ಅವಶ್ಯತೆಯಿಲ್ಲ ಎಂದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ, ಬೈಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ, ಕೊಲ್ಲೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ ಪೂಜಾರಿ ಉಪಸ್ಥಿತರಿದ್ದರು.