ಕಾರ್ಕಳ, ಆ 22 (DaijiworldNews/MS): ಹಾರ್ಡವೇರ್ ಅಂಗಡಿಯಲ್ಲಿ ನಗದು ಕಳ್ಳತನ ನಡೆಸಿದ್ದ ಕುಖ್ಯಾತ ಕಳ್ಳನನ್ನು ಕಾರ್ಕಳ ನಗರ ಪೊಲೀಸರು ಮಡಿಕೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಹಾಸನ ವಿಜಯನಗರದ ನಿವಾಸಿ ಮಹಮ್ಮದ್ ಇಕ್ಬಾಲ್ (54) ಎಂದು ಗುರುತಿಸಲಾಗಿದೆ.
2022ರ ಜೂನ್ ತಿಂಗಳಲ್ಲಿ ಕಾರ್ಕಳ ಬೈಪಾಸ್ ರಸ್ತೆಯಲ್ಲಿರುವ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯ ಮುಂಭಾಗದ ಮಂಜುಶ್ರೀ ಕಟ್ಟಡದಲ್ಲಿದ್ದ ಧ್ವನಿ ಹಾರ್ಡವೇರ್ ಅಂಗಡಿಯಿಂದ 1.45 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಮಹಮ್ಮದ್ ಇಕ್ಬಾಲ್ ಆರೋಪಿಯಾಗಿದ್ದ. ಇದೇ ಪ್ರಕರಣದಲ್ಲಿ ಈಗಾಗಲೇ ಆರೋಪಿ ನೂರ (೪೭) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಇಕ್ಬಾಲ್ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಶಿವಮೊಗ್ಗದ ಸಾಗರ ತಾಲೂಕು ಕಾರ್ಗಲ್ ನ ನಿವಾಸಿಗಳಾದ ತನ್ನ ಸಂಬಂಧಿಕರಾದ ಇಬ್ರಾಹಿಂ ಹಾಗು ಮಾವ ನೂರ ರವರ ಜೊತೆ ಸೇರಿ ಹಾರ್ಡ್ವೇರ್ ಅಂಗಡಿಯಿಂದ ಹಣವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಕಳವು ಮಾಡಿದ ಹಣದಲ್ಲಿ ಭಾಗಶಃ ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಕಾರ್ಗಲ್ ನ ನೂರ ಎಂಬಾತನನ್ನು ಬಂಧಿಸಲಾಗಿದ್ದು ಆತನು ಉಡುಪಿ ಕಾರಾಗೃಹದಲ್ಲಿದ್ದಾನೆ. ಇನ್ನೋರ್ವ ಆರೋಪಿ ಇಬ್ರಾಹಿಂ ಕಾರ್ಗಲ್ ತಲೆಮರೆಸಿಕೊಂಡಿರುತ್ತಾನೆ.
ಆರೋಪಿ ಇಕ್ಬಾಲ್ ಕುಖ್ಯಾತ ಕಳ್ಳನಾಗಿದ್ದು ಈತನ ಮೇಲೆ ಈ ಹಿಂದೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ ನಗರ, ಮಾರ್ಕೆಟ್, ಬನವಾಸಿ ಪೊಲೀಸ್ ಠಾಣೆ, ಹುಬ್ಬಳ್ಳಿ ಎ ಪಿ ಎಮ್ ಸಿ ಪೊಲೀಸ್ ಠಾಣೆ, ಕೊಡಗು ಜಿಲ್ಲೆಯ ಸೊಮವಾರ ಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ ಪೊಲೀಸ್ ಠಾಣೆ, ಹಾಸನ ಜಿಲ್ಲೆಯ ಕೋಣನೂರು ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು,ಬಾಳೆಹೊನ್ನೂರು ಠಾಣೆ, ಮೈಸೂರು ನಗರ ದಕ್ಷಿಣ ಠಾಣೆ, ಚಿತ್ರದುರ್ಗ ಜಿಲ್ಲೆಯ ನಗರ ಠಾಣೆ, ಬೆಂಗಳೂರು ನಗರ ಚಿಕ್ಕಪೇಟೆ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ.