ಮಂಗಳೂರು, ಫೆ02(SS): ಕರಾವಳಿ ಪ್ರದೇಶ ಕೋಮುಗಲಭೆಗಳಿಂದ ಹೆಚ್ಚಾಗಿ ಗುರುತಿಸಲ್ಪಡುತ್ತಿದೆ. ಒಂದಿಬ್ಬರು ಮಾಡುವ ಕಿಡಿಗೇಡಿಗಳ ಘಟನೆಗಳು ಕರಾವಳಿಯಲ್ಲಿ ಕೋಮು ಗಲಭೆಗಳಿಗೆ ಕಾರಣವಾಗುತ್ತಿದೆ ಎಂದು ಮಂಗಳೂರು ನಗರ ಕಮಿಷನರ್ ಟಿ.ಆರ್.ಸುರೇಶ್ ಹೇಳಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಹಿಡಿದಿಡದೇ ಇದ್ದರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಒಂದಿಬ್ಬರು ಮಾಡುವ ಕಿಡಿಗೇಡಿಗಳ ಘಟನೆಗಳು ಕರಾವಳಿಯಲ್ಲಿ ಕೋಮು ಗಲಭೆಗಳಿಗೆ ಕಾರಣವಾಗುತ್ತಿದೆ. ಇಲ್ಲಿ ನೆಗೆಟಿವ್ ವಿಚಾರಗಳು ವೇಗವಾಗಿ ಹರಡುತ್ತಿದೆ. ಮಾಧ್ಯಮಗಳೂ ಇವುಗಳಿಗೆ ಕೆಲವೊಮ್ಮೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.
ಕೋಮು ಗಲಭೆಗಳು ಹೆಚ್ಚಾಗುವುದರಿಂದ ಸರಕಾರಕ್ಕೆ ಆದಾಯ ಏನೂ ಇಲ್ಲ. ಆದರೆ ಸರಕಾರದ ಸ್ಥಿರತೆ, ಅಭಿವೃದ್ಧಿ ಆಗಬೇಕಾದರೆ ಕಾನೂನು ಸುವ್ಯವಸ್ಥೆ ಪ್ರಮುಖ ಅಂಗವಾಗಿದೆ ಎಂದು ಹೇಳಿದರು.
ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಹಾಗೂ ರಸ್ತೆಗಳ ಅಗಲೀಕರಣಕ್ಕೆ ಸ್ಥಳಾವಕಾಶದ ಕೊರತೆಯಿಂದಾಗಿ ಸಂಚಾರ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರಸ್ತೆಗಳಲ್ಲಿ ಮೆರವಣಿಗೆ ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.