ಕಾರ್ಕಳ, ಆ 21 (DaijiworldNews/DB): ಬಜಗೋಳಿ-ದುರ್ಗ ನಡುವೆ ಮಂಜನ್ನಟ್ಟ ಎಂಬಲ್ಲಿ ರಸ್ತೆಯ ಬಲಪಾರ್ಶ್ವದಲ್ಲಿ ಇಂಗುಗುಂಡಿಯೊಂದಿದ್ದು, ಇದು ಅಪಾಯಕಾರಿಯಾಗಿ ಪರಿಣಮಿಸಿದೆ.
ಮಳೆಗಾಲದಲ್ಲಿ ಮಳೆ ನೀರು ತುಂಬಿಕೊಂಡು ಮದಗದಂತೆ ಕಾಣುವ ಈ ಇಂಗುಗುಂಡಿಯು ಮಳೆ ಕಡಿಮೆಯಾಗಿ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಸಹಜವಾಗಿ ನೀರು ಬತ್ತಲು ಶುರುವಾಗುತ್ತದೆ. ಆ ಸಂದರ್ಭದಲ್ಲಿ ಕೆಲವರು ಇದೇ ಇಂಗುಗುಂಡಿಗೆ ನಿರುಪಯುಕ್ತ ವಸ್ತು ಸಹಿತ ತ್ಯಾಜ್ಯವನ್ನು ತಂದು ಎಸೆದು ಹೊಗುತ್ತಾರೆ. ಹಸಿ ತ್ಯಾಜ್ಯ ಕೊಳೆತರೆ ಘನ ತ್ಯಾಜ್ಯವು ಅಲ್ಲಿಯೇ ಉಳಿದು ಮಳೆಗಾಲದ ಸಂದರ್ಭದಲ್ಲಿ ಅದರಿಂದ ಹೊರ ಸೂಸುವ ಅಪಾಯಕಾರಿ ದ್ರವ್ಯಗಳು ನೀರಿನೊಂದಿಗೆ ಮಿಶ್ರಣಗೊಂಡು ಇಂಗುಗುಂಡಿಯ ನೀರೆಲ್ಲ ಕಲುಷಿತಗೊಳ್ಳುತ್ತಿದೆ. ಈ ನೀರು ಪರಿಸರದ ಕೆಲವೊಂದು ಭಾಗಗಳಿಗೆ ಹರಿದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಜಲ ಸಂಪನ್ಮೂಲವು ಪರಿಸರದಲ್ಲಿ ಇರುವ ಕೆರೆ, ಬಾವಿಗಳಿಗೆ ಒಸರು ರೂಪದಲ್ಲಿ ಹರಿಯುವುದರಿಂದ ಕುಡಿಯುವ ನೀರಿನಲ್ಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.
ತಿರುವು ರಸ್ತೆಯಲ್ಲಿದೆ ಇಂಗುಗುಂಡಿ
ಈ ಇಂಗುಗುಂಡಿಯ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಯೂ ಭಾರೀ ತಿರುವು ಮುರುವುವಿನ ಕೂಡಿದೆ. ಈ ಭಾಗದಲ್ಲಿ ಯಾವುದೇ ಮುನ್ಸೂಚನೆಯ ಫಲಕಗಳು ರಸ್ತೆಯ ಬದಿಯಲ್ಲಿ ಅಳವಡಿಸದೇ ಇರುವುದರಿಂದ ಚಾಲಕರ ಗಮನಕ್ಕೆ ಬಾರದೇ ಹೋದ ಹಿನ್ನಲೆಯಲ್ಲಿ ಆಹೋ-ರಾತ್ರಿ ಎನ್ನದೇ ಕೆಲವೊಂದು ಅಪಘಾತಗಳು ನಡೆದಿರುವ ನಿದರ್ಶನಗಳಿವೆ.
ಇಂಗುಗುಂಡಿಯಲ್ಲಿ ಮಳೆ ನೀರು ಶೇಖರಣೆಗೊಳ್ಳುವ ಸಂದರ್ಭದಲ್ಲಿ ನೀರಿನ ಅಕರ್ಷಣೆಗೆ ಒಳಗಾಗಿ ಮಕ್ಕಳು ಈಜಾಲು ಹೋಗುತ್ತಾರೆ. ಇಂಗುಗುಂಡಿಯಲ್ಲಿ ಶೇಖರಣೆಗೊಂಡ ತ್ಯಾಜ್ಯದಿಂದಾಗಿ ತಳಭಾಗದಲ್ಲಿ ಕೆಸರು ಆವರಿಸಿಕೊಂಡಿರುವ ಅಪಾಯ ಕಾದಿಟ್ಟ ಬುತ್ತಿಯಾಗಿದೆ. ರಸ್ತೆ ಅಂಚಿನಲ್ಲಿ ಇರುವ ಇಂಗುಗುಂಡಿಗೆ ತಡೆಗೋಡೆ ನಿರ್ಮಿಸುವುದರಿಂದ ಈ ಪ್ರದೇಶವನ್ನು ಸುರಕ್ಷಿತವಾಗಿ ಕಾಪಾಡಲು ಸಾಧ್ಯವಿದೆ. ಇಂಗುಗುಂಡಿಯಲ್ಲಿ ಸೇರಿಕೊಂಡಿರುವ ತ್ಯಾಜ್ಯವನ್ನು ಹೊರತೆಗೆದು ಸ್ವಚ್ಚತೆ ಪರಿಪಾಲನೆಗೆ ಸೂಚನಾ ಫಲಕಗಳನ್ನು ಅಳವಡಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲಾಡಳಿವು ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇಂಗುಗುಂಡಿ ಹಾಗೂ ಅದರ ಪರಿಸರವಲ್ಲಿ ಸ್ವಚ್ಚತೆ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಮದಕದಂತಿರುವ ಈ ಇಂಗುಗುಂಡಿ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಭರಿಸಿದ್ದು ಅದು ನಾಗರಿಕರದೇ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜೇಶ್ ಹೇಳಿದ್ದಾರೆ.