ಕಾರ್ಕಳ, ಆ 21 (DaijiworldNews/DB): ನಗರದ ರಾಮಸಮುದ್ರದಿಂದ ಪರ್ಪಲೆಗವಿಯ ಭಾರೀ ಗಾತ್ರದ ನೀರಿನ ಟ್ಯಾಂಕ್ಗೆ ಜೋಡಣೆ ಮಾಡಲಾದ ನೀರಿನ ಪೈಪ್ ಹಾದು ಹೋಗಿರುವ ರಸ್ತೆ ಹಾಗೂ ರಸ್ತೆ ಬದಿಯಲ್ಲಿ ಕಂದಕ ನಿರ್ಮಾಣಗೊಂಡಿರುವುದರಿಂದ ಈ ಪ್ರದೇಶವು ಅಪಾಯಕಾರಿ ವಲಯವಾಗಿ ಪರಿಣಮಿಸಿದೆ.
2020-21ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಅನುಷ್ಠಾನಗೊಂಡಿರುವ ಯೋಜನೆ ಇದಾಗಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ ಅನುದಾನ ಕಾದಿರಿಸಲಾಗಿತ್ತು. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, 3.5 ಕೋಟಿ ರೂ.ವೆಚ್ಚ ತಗುಲಿದೆ. ಯೋಜನೆಯಡಿ ರಾಮಸಮುದ್ರ ಪರಿಸರದಲ್ಲಿ ಪಂಪ್-ಸಂಪು, ಶುದ್ಧೀಕರಣ ಘಟಕ, ಪರ್ಪಲೆ ಗವಿ ಪರಿಸರದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, 4 ಕಿ.ಮೀ ಉದ್ದದಲ್ಲಿ ಭಾರೀ ಗಾತ್ರದ ವಿವಿಧ ಆಕಾರದ ಪೈಪ್ ಜೋಡಣೆ ಕಾರ್ಯಗಳು ಒಳಗೊಂಡಿವೆ.
ಕಾಮಗಾರಿ ಅಂತಿಮಗೊಂಡಿದ್ದರೂ, ಟ್ಯಾಂಕ್ಗೆ ರಾಮಸಮುದ್ರದ ನೀರು ಸರಬರಾಜು ಪ್ರಕ್ರಿಯೆ ನಡೆದಿಲ್ಲ. ಯೋಜನೆ ಪರಿಪೂರ್ಣಗೊಂಡಲ್ಲಿ ಹಿರಿಯಂಗಡಿ ಪರಿಸರವು 24/7 ಕುಡಿಯುವ ನೀರು ಸರಬರಾಜು ಪ್ರದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.
ಹೊಸ ಯೋಜನೆ- ಹಳೆ ರಸ್ತೆಗೆ ಸಂಚಕಾರ
ರಾಮಸಮುದ್ರ, ದಾನಸಾಲೆ, ಆನೆಕೆರೆ, ಅರಮನೆ ಮನೆರಸ್ತೆ ಮೂಲಕವಾಗಿ ಪರ್ಪಲೆಗವಿಗೆ ಕುಡಿಯುವ ನೀರಿನ ಪೈಪ್ ಹಾದು ಹೋಗಿದೆ. ದಾನಸಾಲೆಯಿಂದ ಆನೆಕೆರೆಯವರೆಗಿನ ಡಾಂಬರು ರಸ್ತೆಯನ್ನು 2002ರಲ್ಲಿ ಜರುಗಿದ್ದ ಕಾರ್ಕಳ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕಾಂಕ್ರೀಟ್ಕರಣ ರಸ್ತೆಯಾಗಿ ಮಾರ್ಪಡು ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಎಸ್.ಎಂ, ಕೃಷ್ಣ ರಸ್ತೆಯ ಲೋಕಾರ್ಪಣೆ ಮಾಡಿದ್ದರು.
ಅಂತಹ ಕಾಂಕ್ರೀಟ್ ರಸ್ತೆಯ ಒಂದು ಪಾರ್ಶ್ವವನ್ನು ಕಡಿದು ಪೈಪ್ ಅಳವಡಿಸಲಾಗಿದೆ. ಇದರಿಂದಾಗಿ ಕೆಲ ಭಾಗದಲ್ಲಿ ಕಬ್ಬಣದ ಸರಳುಗಳು ಹೊರ ಚಾಚಿಕೊಂಡಿದೆ.
ತಳ ಸೇರಿದ ರಸ್ತೆ
ಆನೆಕೆರೆ ಜಂಕ್ಷನ್ನಲ್ಲಿ ಡಾಂಬರು ರಸ್ತೆ ಕಡಿದು ಪೈಪ್ ಲೈನ್ ಜೋಡಣೆ ಮಾಡಲಾಗಿತ್ತು. ಕಾರ್ಕಳ ಉತ್ಸವದ ಸಂದರ್ಭದಲ್ಲಿ ಆ ಭಾಗಕ್ಕೆ ತೇಪೆ ಹಾಕಲಾಗಿತ್ತಾದರೂ, ಮಳೆಗಾಲದಲ್ಲಿ ನೀರಿನ ಒತ್ತಡಕ್ಕೆ ಹಾಕಲಾಗಿದ್ದ ಮಣ್ಣು ತಳ ಭಾಗಕ್ಕೆ ಸೇರಿಕೊಂಡಿರುವುದರಿಂದ ಪೈಪ್ ಹಾದು ಹೋಗಿರುವ ಜಾಗದಲ್ಲಿ ರಸ್ತೆ ತಳ ಸೇರಿದೆ. ಓಡಾಟ ನಡೆಸುವ ವಾಹನಗಳು ಈ ಪ್ರದೇಶದಲ್ಲಿ ಏಕಾಏಕಿ ನಿಯಂತ್ರಣ ತಪ್ಪುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ.
ಪ್ರಸಕ್ತ ಸಾಲಿನಲ್ಲಿ ಯೋಜನೆ ಪರಿಪೂರ್ಣ
ಪ್ರಸಕ್ತ ಸಾಲಿನಲ್ಲಿ ಯೋಜನೆ ಪರಿಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಗೊಳಿಸಿ ಮಳೆಗಾಲದ ಬಳಿಕ ಡಾಂಬರೀಕರಣ ಕಾಮಗಾರಿ ನಡೆಸಬೇಕಾಗಿತ್ತು. ಆದರೆ ಕಾರ್ಕಳ ಉತ್ಸವದ ವೇಳೆಗೆ ನಗರದ ಸ್ವಚ್ಚತೆಯ ಹಿತದೃಷ್ಠಿಯಿಂದ ದೂಳು ರಹಿತ ವಾತಾವರಣ ಪರಿಕಲ್ಪನೆಯಿಂದ ಪೈಪ್ ಹಾದು ಹೋಗಿರುವ ಜಾಗದಲ್ಲಿ ತೇಪೆ ಕಾಮಗಾರಿ ನಡೆಸಲಾಗಿದೆ. ಉಳಿದ ಕಡೆಗಳಲ್ಲಿ ಡಾಂಬರು ನಡೆಸಲಾಗಿದೆ. ವಿಪರೀಪ ಮಳೆಯಿಂದ ಸಮಸ್ಸೆ ಎದುರಾಗಿದೆ ಎಂದು ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ತಿಳಿಸಿದ್ದಾರೆ.