ಮಂಗಳೂರು, ಆ 20 (DaijiworldNews/HR): ಓಂ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯನಗರ ಫರಂಗಿಪೇಟೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತವಾಗಿ 41 ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು.
ಸಂಜೆ ಮಹಾಪೂಜೆಯ ಬಳಿಕ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀ ದೇವರ ವಿಗ್ರಹದೊಂದಿಗೆ ಸಾಗಿದ ಶೋಭಾಯಾತ್ರೆಯ ಸಂದರ್ಭ ಅಲ್ಲಲ್ಲಿ ಮಾನವ ಪಿರಮಿಡ್ ರಚಿಸಿ, ಮೊಸರು ಕುಡಿಕೆ ಒಡೆಯುವುದರ ಮೂಲಕ ವಿಶಿಷ್ಟ ಮೆರುಗು ನೀಡಲಾಯಿತು.
ಶೋಭಾಯಾತ್ರೆ ಸಮಾಪ್ತಿಯ ಬಳಿಕ ಧಾರ್ಮಿಕ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ಅಧ್ಯಕ್ಷರಾದ ಭಕ್ತಿ ಭೂಷಣದಾಸ ಅವರು ಜನ್ಮಾಷ್ಟಮಿಯ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ, ಅರ್ಕುಳಬೀಡು ಧರ್ಮದರ್ಶಿಗಳಾದ ಶ್ರೀ ವಜ್ರನಾಭ ಶೆಟ್ಟಿ, ಖ್ಯಾತ ಮನೋವೈದ್ಯರಾದ ಡಾ. ರವೀಶ್ ತುಂಗಾ, ರಾಘವೇಂದ್ರ ಕೆ.ವಿ., ಹಿಂದೂ ಮುಖಂಡ ಶರಣ್ ಪಂಪ್ ವೆಲ್, ಉತ್ಸವ ಸಮಿತಿ ಅಧ್ಯಕ್ಷರಾದ ಧನ್ ರಾಜ್ ಶೆಟ್ಟಿ ತೇವು, ಉತ್ಸವ ಸಮಿತಿ ಕಾರ್ಯದರ್ಶಿ ಪ್ರಮೋದ್ ಕರ್ಕೇರ ಅರ್ಕುಳ, ಮತ್ತಿತ್ತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಅತಿಥಿ ಅಭ್ಯಾಗತರನ್ನು ಉತ್ಸವ ಸಮಿತಿ ಕಾರ್ಯದರ್ಶಿ ಪ್ರಮೋದ್ ಕರ್ಕೇರ ಅರ್ಕುಳ ಸ್ವಾಗತಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಲಕುಮಿ ತಂಡದ ಕುಸಾಲ್ದ ಕಲಾವಿದರಿಂದ ನಂಬುನೆನೆ ನಂಬೊಡು ಎಂಬ ತುಳು ಹಾಸ್ಯಮಯ ಕೌಟುಂಬಿಕ ನಾಟಕ ನೆರವೇರಿತು.