ಬಂಟ್ವಾಳ, ಆ 20 (DaijiworldNews/HR): ಕೆಲವು ವರ್ಷಗಳ ಹಿಂದೆ ಅನಕ್ಷರತೆ ತುಂಬಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದು ನಗರ ಭಾಗದ ವಿದ್ಯಾರ್ಥಿಗಳನ್ನು ಮೀರಿಸಿ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆ ಮೂಲಕ ಗ್ರಾಮೀಣ ಭಾಗ ಜ್ಞಾನಿಗಳ ಊರಾಗಿ ಮಾರ್ಪಡುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ದಕ್ಷಿಣ ಕನ್ನಡ ಇದರ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶನಿವಾರ ಬಿ.ಸಿ.ರೋಡಿನಲ್ಲಿ ಹಮ್ಮಿಕೊಂಡ 'ನಮ್ಮೂರ ಹೆಮ್ಮೆ' ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳು ನಮ್ಮೂರ ಹೆಮ್ಮೆಯಾಗಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಅದರಿಂದ ಎನ್.ಎಸ್.ಯು.ಐ.ನಿಂದ ಗೌರವಿಸಲಾಗುತ್ತಿದೆ. ಇಂದಿನ ಸಾಧಕ ಸಾಧಕಿಯರು ಮುಂದೆ ಉನ್ನತ ಮಟ್ಟದ ಶಿಕ್ಷಣ ಪಡೆಯುವ ಮೂಲಕ ನಿಮ್ಮ ಹೆತ್ತವರ ಋಣ ತೀರಿಸಬೇಕು ಎಂದರು.
ಶಿಕ್ಷಣ ಕೊಡದ ತಂದೆ ತಾಯಿ ಮಕ್ಕಳ ಮೊದಲ ವೈರಿ. ಇಂದಿನ ಕಾಲದಲ್ಲಿ ಎಷ್ಟೇ ಕಷ್ಟ ಇದ್ದರೂ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಕಳುಹಿಸುತ್ತಾರೆ. ಹೆಚ್ಚಿನ ಅಂಕ ಗಳಿಸಲು ಹೆತ್ತವರು, ಅಧ್ಯಾಪಕರು ಸಹಕಾರ, ಪರಿಶ್ರಮ ಪಡುತ್ತಿದ್ದಾರೆ. ಅಂತಹ ಪೋಷಕರು, ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳು ಹೆಮ್ಮೆ ಪಡಬೇಕು ಎಂದು ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯ್ಕ್ ಮಾತನಾಡಿ, ಸಣ್ಣ ಪುಟ್ಟ ವಿಚಾರಗಳಿಗೆ ಆತ್ಮಹತ್ಯೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಸಮಸ್ಯೆ ಬಂದರೂ ವಿದ್ಯಾರ್ಥಿಗಳು ಆತ್ಮಸ್ಥೈರ್ಯ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಕೆಟ್ಟ ನಿರ್ಧಾರಗಳನ್ನು ಮಾಡಿ ಅತ್ಯಮೂಲ್ಯವಾದ ಜೀವನವನ್ನು ಕಳೆದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.
ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಪದ್ಮಶೇಖರ್ ಜೈನ್, ಜಿಲ್ಲಾ ಉಪಾಧ್ಯಕ್ಷ ಪವನ್ ಸಾಲಿಯಾನ್, ಅಂಕುಶ್, ಅನ್ವಿತ್ ಕಟೀಲಿ, ನಜೀಬ್, ಮಲ್ಲಿಕಾ ವಿ. ಶೆಟ್ಟಿ, ಇಬ್ರಾಹೀಂ ನವಾಝ್, ಜಯಂತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಎನ್.ಎಸ್.ಯು.ಐ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾಝ್ ಸುಳ್ಯ ಪ್ರಸ್ತಾವಿಕವಿಕವಾಗಿ ಸ್ವಾಗತಿಸಿದರು. ಎನ್.ಎಸ್.ಯು.ಐ. ಜಿಲ್ಲಾ ಉಪಾಧ್ಯಕ್ಷ ಅಂಕುಶ್ ಧನ್ಯವಾದಗೈದರು.ಸುಹಾನ್ ಆಳ್ವ ಹಾಗೂ ಬಾತಿಶ್ ಅಲ್ಕೆಮಜಲು ಕಾರ್ಯಕ್ರಮ ನಿರೂಪಿಸಿದರು.