ಮಂಗಳೂರು, ಆ 20 (DaijiworldNews/HR): ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ಧಿಗಾಗಿ ಈ ಬಾರಿಯ ಆಯವ್ಯಯದಲ್ಲಿ ಸರ್ಕಾರ 400 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆ.20ರ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಹಿಂದುಳಿದ ವರ್ಗಗಳ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳನ್ನು ನಿರ್ಮಿಸಬೇಕೆನ್ನುವ ಉದ್ದೇಶದಿಂದ ಒಂದು ಸಾವಿರ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತಹ ಬೃಹತ್ ಹಾಸ್ಟೆಲ್ ಗಳ ನಿರ್ಮಾಣಕ್ಕೆ ಚಿಂತಿಸುತ್ತಿದೆ, ಹಿಂದುಳಿದ ವರ್ಗದ ಸಮುದಾಯದ ಅಭಿವೃದ್ಧಿಗಾಗಿ 400 ಕೋಟಿ ರೂ. ಈ ವರ್ಷದ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಮೀಸಲಿರಿಸಲಾಗಿದೆ, ಕೇಂದ್ರ ಸರ್ಕಾರ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಆಯೋಗವನ್ನು ಪ್ರಾರಂಭಿಸಿ, ಅದಕ್ಕೊಂದು ಸಂವಿಧಾನ್ವಕವಾದ ಹುದ್ದೆಯನ್ನು ನಿರ್ಮಾಣ ಮಾಡುವುದರ ಮೂಲಕ ಕೇಂದ್ರದಲ್ಲೂ ಬದಲಾವಣೆ ಮಾಡುವ ಪ್ರಯತ್ನವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಸಹಸ್ರಾರು ವಿದ್ಯಾರ್ಥಿಗಳು ಇಂದು ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಡಿ. ದೇವರಾಜ ಅರಸು ವಸತಿ ನಿಲಯಗಳು ಇಂದು ಪ್ರಾರಂಭವಾಗಿರುವುದೇ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸ ನೀಡಬೇಕು ಎಂಬ ಉದ್ದೇಶದಿಂದ ಆ ವಿದ್ಯಾರ್ಥಿಗಳಿಗೆ ಹಲವಾರು ಸ್ಕಾಲರ್ ಶಿಪ್ ಗಳು ಸೇರಿದಂತೆ ಶಿಕ್ಷಣದಲ್ಲಿಯೂ ವಿಶೇಷವಾದ ಅವಕಾಶಗಳು ಲಭ್ಯವಾಗುತ್ತಿದೆ ಎಂದು ಹೇಳಿದರು.
ಸಾಮಾನ್ಯವಾಗಿ ರಾಜಕಾರಣದಲ್ಲಿ ದೊಡ್ಡ ಸಮುದಾಯದ ವ್ಯಕ್ತಿಗಳೇ ರಾಜಕಾರಣ ಮಾಡುವುದೆಂಬ ಕಾಲಘಟ್ಟವೊಂದಿತ್ತು, ಅದನ್ನು ದೂರ ಮಾಡಿ ಎಲ್ಲರಿಗೂ ಅವಕಾಶವಿದೆ ಅದನ್ನು ಎಲ್ಲರೂ ಸಮಾನವಾಗಿ ಬಳಸಿಕೊಳ್ಳಿ ಎನ್ನುವ ಮಾತನ್ನು ಹೇಳಿ ಅವಕಾಶಗಳನ್ನು ಕಲ್ಪಿಸಿಕೊಟ್ಟವರು ಡಿ. ದೇವರಾಜ ಅರಸು, ಅವರು ಜತೆಗೆ ಆ ರೀತಿ ಅವಕಾಶಗಳನ್ನು ಕಲ್ಪಿಸಿ ಕೊಟ್ಟದ್ದರಿಂದ ನಮ್ಮ ಜಿಲ್ಲೆಯು ಸೇರಿ ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಇಂದು ಸಣ್ಣ ಸಣ್ಣ ಸಮುದಾಯದ ಹಲವಾರು ನಾಯಕರು ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ಈ ವರ್ಷ ದೇವರಾಜ ಅರಸು ಅವರ ಹೆಸರಿನ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮುಲ್ಕಿ ಜಯಾನಂದ ದೇವಾಡಿಗ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿದ ಸಚಿವರು, ದೇವರಾಜ ಅರಸು ಅವರ ಕಾಲಘಟ್ಟದಲ್ಲಿ ಬದುಕಿದಂತಹ ಒಬ್ಬ ಹಿರಿಯ ವ್ಯಕ್ತಿ ಜಯಾನಂದ ದೇವಾಡಿಗರು, ಅವರಿಗೆ ಇಂದು ಪ್ರಶಸ್ತಿ ನೀಡುವ ಮೂಲಕ ಅವರ ಸೇವೆಯನ್ನು ಗುರುತಿಸಿ ಅಭಿನಂದನೆಯನ್ನು ಸಲ್ಲಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಹಾಗೂ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪೆರೀಫೆಸರ್ ಡಾ. ತ್ರಿವೇಣಿ ಅರಸು ಅವರ ತತ್ವ ಹಾಗೂ ಚಿಂತನೆಗಳ ಬಗ್ಗೆ ಮಾತನಾಡಿದರು.
ಈ ವರ್ಷ ಜಿಲ್ಲಾ ಮಟ್ಟದ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಮುಲ್ಕಿ ಜಯಾನಂದ ದೇವಾಡಿಗ ಅವರಿಗೆ ಸಚಿವರು ಹಾಗೂ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.
ಇದಕ್ಕೂ ಮೊದಲು ಸಚಿವರು ಹಿಂದುಳಿದ ವರ್ಗಗಳ ವೃತ್ತಿ ಕುಲಕಸುಬುಗಳ ವಿವಿಧ ಮಳಿಗೆಗಳಿಗೆ ಚಾಲನೆ ನೀಡಿದರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ, ಸಹಾಯಕ ಆಯುಕ್ತ ಮದನ್ ಮೋಹನ್ ವೇದಿಕೆಯಲ್ಲಿದ್ದರು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಶ್ಮಿ ಸ್ವಾಗತಿಸಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.