ಕಾರ್ಕಳ, ಆ 20 (DaijiworldNews/HR): ಕಾರ್ಕಳ ಜೈನಮಠದ ಅಭಿವೃದ್ದಿಗಾಗಿ ಧರ್ಮಸ್ಥಳದಿಂದ 25 ಲಕ್ಷ ರೂ. ಕೊಡುಗೆ ನೀಡಲಾಗಿದೆ. ಸಮುದಾಯ ಪ್ರತಿಯೊಬ್ಬರೂ ತಮ್ಮಿಂದಾದ ಸಹಕಾರವನ್ನು ನೀಡಿ, ಅಭಿವೃದ್ದಿಗೆ ಸಹಕರಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ದಾನಶಾಲೆ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯಾವರ್ಯ ಸ್ವಾಮೀಜಿ ಅವರ 70ನೇ ಜನ್ಮದಿನದ ಸಂಭ್ರಮಾಚರಣೆ ಮತ್ತು ದಾನಶಾಲೆ ಶ್ರೀ ಜೈನಮಠದ ಪುನಃನಿರ್ಮಾಣದ ಶಿಲಾನ್ಯಾಸ ವಿಧಿಯನ್ನು ನೆರವೇರಿಸಿ ಬಳಿಕ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಯಾಯ ಧರ್ಮದ ಮಠಗಳು, ಆಯಾಯ ಧರ್ಮದ ಪ್ರತೀಕವಾಗಿದೆ. ಮಠಗಳು ನಮಗೆ ಆದರ್ಶವಾಗಿದ್ದು, ನಮ್ಮ ಧಾರ್ಮಿಕ ನೀತಿಗೆ ಶಕ್ತಿ ತುಂಬುತ್ತದೆ ಎಂದರು.
ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಜೈನ ಸಮುದಾಯದ ಪ್ರತಿಯೊಬ್ಬರ ಸಹಭಾಗಿತ್ವ ಈ ಮಠದ ಅಭಿವೃದ್ದಿಗೆ ಪೂರಕವಾಗಬೇಕು. ಸರಕಾರದಿಂದಲೂ ಗರಿಷ್ಠ ಅನುದಾನವನ್ನು ಒದಗಿಸುವ ಪ್ರಯತ್ನವನ್ನು ಮಾಡಲಿದ್ದೇನೆ. ಈಗಾಗಲೇ ಆನೆಕೆರೆ ಕೆರೆ ಬಸದಿ ಅಭಿವೃದ್ದಿಗೆ 50 ಲಕ್ಷ ರೂ, ಕೆರೆ ಪುನರ್ನಿರ್ಮಾಣಕ್ಕೆ 2.50 ಕೋಟಿ ರೂ, ಮುಡಾರು ಅಬ್ಬನಬೆಟ್ಟು ರಸ್ತೆ ಅಭಿವೃದ್ದಿಗೆ 60 ಲಕ್ಷ ರೂ, ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿದ ಕಾರ್ಕಳ ಜೈನಮಠದ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಮಠ ಅಂದರೆ ಬೆಳಕು. ಅಜ್ಞಾನದ ಅಂಧಕಾರವನ್ನು ಕಳೆದು ಸಜ್ಞಾನದ ಬೆಳಕನ್ನು ಈ ಮಠಗಳು ಮತ್ತು ಧರ್ಮಗುರುಗಳು ನೀಡುತ್ತಾರೆ ಎಂದರು.
ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ದಾನ ಮತ್ತು ಪಾಲನೆ ಶ್ರೇಷ್ಠ ಕಾರ್ಯ. ಕಾರ್ಕಳದ ಭಟ್ಟಾರಕರು ತ್ಯಾಗ, ವೈರಾಗ್ಯ, ಪರೋಪಕಾರ ಮತ್ತು ಲೋಕಕಲ್ಯಾಣ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೈರವಸರ ಇತಿಹಾಸವನ್ನು ಅವಲೋಕಿಸಿದಾಗ ತುಳು ಸಂಸ್ಕೃತಿಯ ಉಳಿವಿಗಾಗಿ ಅವರ ಕೊಡುಗೆ ಅನನ್ಯ ಎಂದರು.
ಶ್ರೀ ಜೈನ ಧರ್ಮ ಜೀವನೋದ್ಧಾರಕ ಸಂಘ ಕಾರ್ಕಳ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಜೈನ ಮಠದ ಜೀರ್ಣೋದ್ದಾರಕ್ಕೆ ವೈಯಕ್ತಿಕವಾಗಿ 15 ಲಕ್ಷ ರೂ ನೀಡುವುದಾಗಿ ಘೋಷಿಸಿದ್ದು, ಸಮಾರಂಭಕ್ಕೆ ಆಗಮಿಸಿದ 7 ಜನ ಸ್ವಾಮೀಜಿಗಳ ಮಠಕ್ಕೆ ತಲಾ ಒಂದೊಂದು ಲಕ್ಷ ರೂ. ನೆರವನ್ನು ಅವರು ವಿತರಿಸಿದರು.
ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಚಾರ್ಯವರ್ಯ ಸ್ವಾಮೀಜಿ, ವರೂರು ಜೈನಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಸೋಂದಾ ಶ್ರೀ ಸ್ವಾದಿ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ನರಸಿಂಹರಾಜಪುರ ಶ್ರೀ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮಂಡ್ಯ ಆರತಿಪುರ ಜೈನಮಠದ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮಾಣಿಲ ಶ್ರೀ ಮೋಹನ್ದಾಸ್ ಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಹ್ವಾನಿತರಾಗಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಿಜಯಕುಮಾರ್ ಹಾಗೂ ಪುಷ್ಪರಾಜ್ ಜೈನ್ ಮಂಗಳೂರು ಉಪಸ್ಥಿತರಿದ್ದರು.
ಎಂ.ಕೆ.ವಿಜಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.