ಮಂಗಳೂರು, ಫೆ02(SS): ಭೂಗತ ಪಾತಕಿ ರವಿ ಪೂಜಾರಿ ಬಂಧನ ಕುರಿತಂತೆ ತಮಗೆ ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ. ಮಾಧ್ಯಮಗಳ ಮೂಲಕವೇ ವಿಚಾರ ತಿಳಿದುಬಂದಿದ್ದು, ಆತನ ವಿರುದ್ಧ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ ಸಂಬಂಧಿಸಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿದ್ದಾರೆ.
ರವಿ ಪೂಜಾರಿ, 2009ರಲ್ಲಿ ನೌಶಾದ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, 2008ರ ಸುಲಿಗೆ ಪ್ರಕರಣದಲ್ಲೂ ಆರೋಪಿ. ಕೆಲವೊಂದು ಪ್ರಕರಣಗಳು ತನಿಖೆಯಲ್ಲಿದ್ದು, ಮತ್ತೆ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಯಲ್ಲಿವೆ. ಆತನ ವಿರುದ್ಧ 2012ರಲ್ಲಿ ರೆಡ್ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಈ ನೋಟಿಸ್ 5 ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತಿದ್ದು, 2017ರಲ್ಲಿ ಮತ್ತೆ ನವೀಕರಣಗೊಂಡಿತ್ತು ಎಂದು ಆಯುಕ್ತರು ತಿಳಿಸಿದ್ದಾರೆ.
ಉಡುಪಿಯ ನಾನಾ ಠಾಣೆಯಲ್ಲಿ ದಾಖಲಾಗಿದೆ 10 ಕೇಸ್
2006 ರವಿ ಪೂಜಾರಿ ಮೇಲೆ ಮೊದಲ ಪ್ರಕರಣ ಪಡುಬಿದ್ರೆ ಠಾಣೆಯಲ್ಲಿ ದಾಖಲಾಗಿದ್ದು, ಬಳಿಕ ಕಾರ್ಕಳ, ಉಡುಪಿ, ಬ್ರಹ್ಮಾವರ ಠಾಣೆ ಸಹಿತ ಒಟ್ಟು 10 ಕೇಸ್ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.