ಉಡುಪಿ, ಆ 20 (DaijiworldNews/DB): ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 20ರ ಶನಿವಾರ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಮುಂಜಾವಿನ 2.21ರ ವೇಳೆಗೆ ಶ್ರೀ ಕೃಷ್ಣ ದೇವರಿಗೆ ಎಲ್ಲಾ ಮಠಗಳ ಮುಖ್ಯಸ್ಥರ ಸಮ್ಮುಖದಲ್ಲಿ ಕೃಷ್ಣಾಪುರ ಮಠದ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಭಗವಾನ್ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು.
ಮಧ್ಯಾಹ್ನದ ಬಳಿಕ ಉಡುಪಿ ರಥಬೀದಿಯಲ್ಲಿ ಸಾಂಪ್ರದಾಯಿಕ ವಿಟ್ಲ ಪಿಂಡಿ ಉತ್ಸವ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ವೇಳೆ ಹುಲಿವೇಷ ತಂಡಗಳು ಮತ್ತು ಇತರ ಮನರಂಜನಾ ತಂಡಗಳು ಆಗಮಿಸಲಿವೆ.
ಬಳಿಕ ಶ್ರೀ ಕೃಷ್ಣ ದೇವರಿಗೆ ವಿವಿಧ ಪೂಜಾವಿಧಿಗಳು ಜರಗಲಿವೆ. ಕೃಷ್ಣಾಪುರ ಮಠದ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮತ್ತು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಮುಂದಾಳತ್ವದಲ್ಲಿ ತುಳಸಿ ದಳ ಅರ್ಪಣೆ, ಮಹಾಪೂಜೆ ಸೇರಿದಂತೆ ವಿವಿಧ ಪೂಜೆಗಳು ಜರಗಲಿವೆ. ಬಳಿಕ ಆರ್ಘ್ಯ ಪ್ರದಾನ ನಡೆಯಲಿದೆ.