ಉಡುಪಿ, ಆ 20 (DaijiworldNews/MS): ಉಡುಪಿ ಜಿಲ್ಲೆಯಾಗಿ ಇದೇ ಅಗಸ್ಟ್ 25 ನೇ ತಾರೀಖಿನಂದು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದ್ದು, ಉಡುಪಿಯ ಪ್ರವಾಸಿ ತಾಣಗಳನ್ನು ರಾಜ್ಯದ ಜನರಿಗೆ ತಿಳಿಸಿ ಅವರನ್ನು ಉಡುಪಿಯತ್ತ ಆಕರ್ಷಿಸಲು ಪ್ರವಾಸೋದ್ಯಮದ ದೃಷ್ಟಿಯಿಂದ "ಉಡುಪಿಗೆ ಬನ್ನಿ" ಎಂಬ ಆಹ್ವಾನದಡಿ ರಾಜ್ಯದಾದ್ಯಂತ 3 ತಿಂಗಳ ಕಾಲ ರಥಯಾತ್ರೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅವರು ಇಂದು ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಆಚರಣೆ ಪ್ರಯುಕ್ತ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ, ' ಈ ರಜತ ಮಹೋತ್ಸವವನ್ನು ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲೂ ಆಚರಿಸಲಾಗುವುದು. ಈ ಸಂಭ್ರಮ ಮುಂದಿನ ಆರು ತಿಂಗಳು ಜನವರಿ ೨೫ರವರೆಗೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಯುವಕರನ್ನು ಸೇನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಗಸ್ಟ್ 24 ರಂದು 25 ಕಾಲೇಜುಗಳ ಕೂಡುವಿಕೆಯಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನಿಂದ "ಅಗ್ನಿಪಥ್ ದೌಡ್" ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ. ಕಾಲೇಜುಗಳಲ್ಲಿ ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಈ ರಜತ ಮಹೋತ್ಸವವನ್ನು ಜಿಲ್ಲೆಯ ಜನರ ಹಬ್ಬವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
1997 - 2022 ರವೆಗೆ ಯಾರ್ಯಾರು ಅಂದರೆ ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿಯವರನ್ನು ಸೇರಿದಂತೆ, ಬೇರೆ ಬೇರೆ ಹಂತದ ಜನಪ್ರತಿನಿದಿಗಳನ್ನು, ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ. ಇದು ಸರಕಾರಿ ಕಾರ್ಯಕ್ರಮ ಅಲ್ಲ, ಜನರ ಕಾರ್ಯಕ್ರಮ. ಪ್ರತಿ ತಿಂಗಳ ೨೫ ರಂದು ಆಯಾಯ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ -ಗಳಾದ ಪ್ರಸನ್ನ ಎಚ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಹಾಕೆ ಅಕ್ಷಯ್ ಮಚ್ಚಿಂದ್ರ, ಅಪರ ಜಿಲ್ಲಾಧಿಕಾರಿಗಳಾದ ವೀಣಾ ಉಪಸ್ಥಿತರಿದ್ದರು.