ಪಡುಬಿದ್ರಿ, ಆ 19(DaijiworldNews/SM): ಬಡವರ ಕಂಡು ಮನ ಮಿಡಿಯುವ ಕಟಪಾಡಿಯ ರವಿಯವರು ಈ ವರ್ಷದ ಅಷ್ಟಮಿಗೆ ಮತ್ತೊಂದು ದೈತ್ಯ ವಿಭಿನ್ನ ವೇಷದೊಂದಿಗೆ ರಂಜಿಸಲು ಬಂದಿದ್ದಾರೆ. ತನ್ನದು ಕಷ್ಟದ ಜೀವನವಾಗಿದ್ದರೂ, ತನಗಿಂತ ಮಿಗಿಲಾಗಿ ಅನೇಕರು ಸಂಕಷ್ಟದಲ್ಲಿರುವುದನ್ನು ಅರಿತುಕೊಂಡಿರುವ ಸಮಾಜ ಸೇವೆಗೆ ಮುಂದಾಗಿದ್ದಾರೆ. ಪ್ರತೀ ಅಷ್ಟಮಿಗೆ ರವಿಯಣ್ಣ ದೇಹ ದಂಡಿಸುತ್ತಾರೆ. ಅನಾರೋಗ್ಯದ ಮಕ್ಕಳಿಗೆ ನೆರವಾಗುತ್ತಾರೆ. ರವಿ ಕಟಪಾಡಿ ಅಷ್ಟಮಿಗೆ ವೇಷ ಧರಿಸಿ ತನಗೆ ಏನನ್ನೂ ಉಳಿಸಿದೆ ಸಿಕ್ಕಿದ್ದೆಲ್ಲವನ್ನು ಅನಾರೋಗ್ಯದಲ್ಲಿರುವವರ ಚಿಕಿತ್ಸೆ ಧಾರೆ ಎರೆಯುವ ಮಹಾ ಚೇತನರೆಣಿಸಿಕೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷದ ಅಷ್ಟಮಿಗೂ ರವಿಯಣ್ಣ ವಿಭಿನ್ನ ವೇಷ ಧರಿಸಿ ಸಹಾಸಗಾತೆಯೊಂದಕ್ಕೆ ಕೈಹಾಕಿರುವ ನಮ್ಮ ರವಿಯಣ್ಣನ ಸೇವೆಗೆ ೮ ವಸಂತಗಳು ತುಂಬುತ್ತಿವೆ. ಕಳೆದ ೭ ವರ್ಷಗಳಿಂದ ಹಲವಾರು ವೇಷಗಳಲ್ಲಿ ಜನರ ಗಮನ ಸೆಳೆಯುವುದರೊಂದಿಗೆ ಬೃಹತ್ ಮೊತ್ತದ ದೇಣಿಗೆ ಸಂಗ್ರಹವಾಗಿದೆ. ಬರೋಬ್ಬರಿ ೯೦ ಲಕ್ಷ ರೂ. ಸಂಗ್ರಹವಾಗಿದ್ದು, ತನಗಾಗಿ ಒಂದಿಷ್ಟು ಉಳಿಸದೆ ಎಲ್ಲವನ್ನು ಚಿಕಿತ್ಸೆಯ ನೆರವಿಗಾಗಿಯೇ ಹಂಚಿರುವುದು ರವಿಯಣ್ಣದ ಹೃದಯ ವೈಷಾಲ್ಯತೆಗೆ ಸಾಕ್ಷಿಯಾಗಿದೆ.
ರವಿ ಕಟಪಾಡಿ ಈ ಬಾರಿ ಅಷ್ಟಮಿಗೆ ಹಾಲಿವುಡ್ ಚಿತ್ರದ ‘ಡೆಮೊನ್’ ವೇಷಕ್ಕೆ ಶುಕ್ರವಾರ ಬೆಳಿಗ್ಗೆ ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಮತ್ತು ಕೊರಗಜ್ಜ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಹಣ ಸಂಗ್ರಹಣೆಗಾಗಿ ತೆರಳಿದ್ದಾರೆ.
ಕಳೆದ ಏಳು ವರ್ಷಗಳಿಂದ ವೇಷ ಧರಿಸಿ ಒಟ್ಟು ೮೯.೭೫ಲಕ್ಷ ರೂ. ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದು, ಈ ಹಣವನ್ನು ಈವರೆಗೆ ಒಟ್ಟು ೬೬ ಅನಾ ರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲಾಗಿದೆ. ಈ ಬಾರಿ ೧೦ಲಕ್ಷ ರೂ. ಹಣ ಸಂಗ್ರಹಿಸುವ ಮೂಲಕ ಒಟ್ಟು ಒಂದು ಕೋಟಿ ರೂ. ಗುರಿ ತಲುಪುವ ಯೋಜನೆ ಹಾಕಿಕೊಂಡಿದ್ದಾರೆ ರವಿಯಣ್ಣ.
ಹೈದರಬಾದ್, ಮಂಗಳೂರು, ಮಡಿಕೇರಿ, ಕಟಪಾಡಿಯ ಒಟ್ಟು ಏಳು ಮಂದಿ ಕಲಾವಿದರು ವೇಷಕ್ಕಾಗಿ ಕಳೆದ ಒಂದು ತಿಂಗಳುಗಳಿಂದ ಸಿದ್ಧತೆ ನಡೆಸಿದ್ದಾರೆ. ವೇಷ ಧರಿಸಿ ಉಡುಪಿ, ಮಲ್ಪೆ, ಕಟಪಾಡಿ, ಉದ್ಯಾವರಗಳಿಗೆ ತೆರಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಭರವಸೆಯನ್ನು ರವಿಯಣ್ಣ ಹೊಂದಿದ್ದಾರೆ.