ಮಂಗಳೂರು, ಆ 19(DaijiworldNews/SM): ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯರ ಮೇಲೆ ನಿನ್ನೆ ಮೊಟ್ಟೆ ಎಸೆದಿರೋದು ಖಂಡನೀಯ ಎಂದಿದ್ದಾರೆ.
ಕೆಲವೊಂದು ಸಮಾಜಘಾತುಕ ಶಕ್ತಿಗಳು ಹಾಗೂ ಬಿಜೆಪಿಯವರ ಕೃತ್ಯ. ಇದು ಬರೇ ದೈಹಿಕ ದಾಳಿಯ ಪ್ರಯತ್ನವಲ್ಲ. ವೈಚಾರಿಕತೆ ಮತ್ತು ಪ್ರಜಾಪ್ರಭುತ್ವದ ತತ್ವ ಆದರ್ಶದ ಮೇಲೆ ನಡೆದ ದಾಳಿಯಾಗಿದೆ. ಸಿದ್ದಾಂತದ ವಿರುದ್ದದ ದಬ್ಬಾಳಿಕೆಯ ವಿರುದ್ದ ಕಾಂಗ್ರೆಸ್ ಹೋರಾಡುತ್ತದೆ. ಭಯ ಹುಟ್ಟಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಧ್ವನಿ ಅಡಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ.
ಇದು ಪರೋಕ್ಷ ಮತ್ತು ನೇರವಾಗಿ ರಾಜ್ಯ ಬಿಜೆಪಿ ಕುಮ್ಮಕ್ಕಿನಿಂದ, ಪ್ರಾಯೋಜಿತವಾಗಿ ನಡೆದಿದೆ. ಪ್ರತಿಪಕ್ಷ ನಾಯಕ ಸರ್ಕಾರವನ್ನ ಎಚ್ಚರಿಸೋ ಕೆಲಸ ಮಾಡ್ತಾರೆ. ಮಳೆ ಹಾನಿಯಲ್ಲಿ ಜನರ ಸಮಸ್ಯೆ ವೀಕ್ಷಿಸಲು ಅವರು ಹೋಗಿದ್ದಾರೆ. ಆದರೆ ಅವರ ಧ್ಬನಿ ಅಡಗಿಸೋ ಕೆಲಸ ಮಾಡಲಾಗಿದೆ. ಹಾಗಾದರೆ ಇವರ ಬಗ್ಗೆ ಯಾರೂ ಮಾತನಾಡಲೇ ಬಾರದಾ? ಎಂದು ಅವರು ಪ್ರಶ್ನಿಸಿದ್ದಾರೆ.