ಮಂಗಳೂರು, ಆ 19 (DaijiworldNews/DB): ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಅಲ್ಲಿನ ಅಭಿವೃದ್ದಿಗಾಗಿ ಸಾಧಿಸಬೇಕಾದ ಗುರಿಯನ್ನು ನಿಗದಿಪಡಿಸುವುದು ಹಾಗೂ ಅವುಗಳನ್ನು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಕಾರ್ಯರೂಪಕ್ಕೆ ತರುವ ಕಾರ್ಯತಂತ್ರವೇ ದೂರ ದೃಷ್ಟಿ ಯೋಜನೆ ಎಂದು ದ,ಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದ್ದಾರೆ.
ಗ್ರಾಮ ಪಂಚಾಯತ್ಗಳ ದೂರದೃಷ್ಟಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳಿಗಾಗಿ ನಡೆದ ಕಾರ್ಯಾಗಾರವನ್ನು ಅವರು ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಆಗಸ್ಟ್19ರ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ 39ಬಿ ರನ್ವಯ ಎಲ್ಲಾ ಗ್ರಾಮ ಪಂಚಾಯತ್ಗಳು ಹೊಸದಾಗಿ ರಚನೆಯಾದ ನಂತರ ಮುಂದಿನ ಐದು ವರ್ಷಗಳಿಗೆ ದೂರ ದೃಷ್ಟಿ ಯೋಜನೆಗಳನ್ನು ಸಿದ್ಧಪಡಿಸಬೇಕಿರುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಬಡತನ ಮುಕ್ತ, ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ, ಸಾಮಾಜಿಕ ಸುರಕ್ಷತೆಯುಳ್ಳ ಗ್ರಾಮ, ಮೂಲಸೌಕರ್ಯ ಸ್ವಾವಲಂಬಿ ಗ್ರಾಮ, ಉತ್ತಮ ಆಡಳಿತವನ್ನು ದೂರದೃಷ್ಟಿ ಯೋಜನೆ ಒಳಗೊಂಡಿದೆ. ನಾವು ಎಲ್ಲಿದ್ದೇವೆ? ನಾವು ಎಲ್ಲಿಗೆ ಹೋಗಬೇಕು? ಹೇಗೆ ಹೋಗಬೇಕು? ಈ ಪ್ರಮುಖ ಮೂರು ಪ್ರಶ್ನೆಗಳಿಗೆ ಉತ್ತರ ನೀಡುವುದೇ ದೂರದೃಷ್ಟಿ ಯೋಜನೆ. ಅಂದರೆ ನಿಗದಿ ಪಡಿಸಿದ ಕಾಲಾವಧಿಯಲ್ಲಿ ಪ್ರಸ್ತುತ ಸ್ಥಿತಿಯಿಂದ ಸಮುದಾಯವು ಅಪೇಕ್ಷಿಸುವ ನಿರೀಕ್ಷಿತ ಸ್ಥಾನಕ್ಕೆ ತಲುಪುವ ಪ್ರಯತ್ನಿಸುವ ಪ್ರಕ್ರಿಯೆ ದೂರದೃಷ್ಟಿತ್ವವೆಂದು ಕರೆಯಬಹುದಾಗಿದೆ, ಈ ಹಿನ್ನೆಲೆಯಲ್ಲಿ ವಲಯವಾರು ಸಾಮಾಜಿಕ ಮತ್ತು ಮೂಲಸೌಕರ್ಯ ಕೊರತೆಗಳನ್ನು ಗುರುತಿಸಬೇಕು ಎಂದವರು ತಿಳಿಸಿದರು.
ಗ್ರಾಮದಲ್ಲಿ ವಾಸವಿರುವ ಕಡು ಬಡವರು, ಮಹಿಳೆಯರು, ಮಕ್ಕಳು, ವೃದ್ಧರು, ವಿಶೇಷ ಚೇತನರು ಮುಂತಾದ ಸಾಮಾಜಿಕ ದುರ್ಬಲ ವರ್ಗಗಳು ಒಳಗೊಂಡಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಹಂತದ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬಂದಿಗಳ ಸಾಕಾರದೊಂದಿಗೆ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕಿರುತ್ತದೆ ಎಂದು ಅವರು ತಿಳಿಸಿದರು.
ವೀಡಿಯೋ ಮೂಲಕ ಸಂದೇಶ ನೀಡಿದ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗಿಂತ ಮಾನವ ಸಂಪನ್ಮೂಲದ ಬೆಳವಣಿಗೆಯಾಗಬೇಕು. ಶಿಕ್ಷಣ, ಆರೋಗ್ಯ, ಮಕ್ಕಳ ಪೌಷ್ಟಿಕತೆ ಮೊದಲಾದವುಗಳನ್ನು ಒದಗಿಸುವ ಕುರಿತಂತೆ ಚಿಂತನೆ ನಡೆಯಬೇಕು. ಸಾಮಾಜಿಕ ಬದಲಾವಣೆಯಾಗಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದರು.
ರಾಜ್ಯ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಅಧಿಕಾರಿ ಅಬೂಬಕ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಕುಮಾರ್, ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್., ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯಕ್ ಉಪಸ್ಥಿತರಿದ್ದರು.