ಮಂಗಳೂರು, ಆ 19 (DaijiworldNews/DB): ಜಿಲ್ಲೆಯಲ್ಲಿ ಕೋಮು ಗಲಭೆ ಉಂಟು ಮಾಡುವವರ ಜೊತೆಗೆ ಅದಕ್ಕೆ ಕುಮ್ಮಕ್ಕು ನೀಡುವ ಸೂತ್ರದಾರರನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಶಿಕ್ಷೆ ನೀಡಿದರೆ ಕೋಮು ಗಲಭೆಗಳು ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಶಾಂತಿಯನ್ನು ಬಯಸುತ್ತದೆಯೇ ಹೊರತು ಯಾವುದೇ ರೀತಿಯ ಹಿಂಸೆಯನ್ನು ಬಯಸುವುದಿಲ್ಲ. ಪ್ರಾಕೃತಿಕ ವಿಕೋಪದಿಂದ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ವೇಳೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣ ಖಂಡನೀಯ. ಅವರು ಮಾಜಿ ಮುಖ್ಯಮಂತ್ರಿ ಮಾತ್ರವಲ್ಲ, ಸಮಾಜದಲ್ಲಿ ಒಳ್ಳೆಯ ಘನತೆ ಹೊಂದಿದವರು ಎಂದರು.
ಕೋಮು ವೈಷಮ್ಯ ಬಿತ್ತುವ ಸಂಘಟನೆಗಳ ಕೆಲಸಗಳು ಅತಿರೇಕಗೊಳ್ಳುತ್ತಿದೆ. ಇಂತಹವುಗಳಿಂದಲೇ ಕೋಮು ಗಲಭೆ ಮತ್ತು ಧ್ರುವೀಕರಣ ನೀತಿಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ನಡೆದ ಕೆಲವು ಕೋಮು ಸಂಬಂಧಿ ಹತ್ಯೆಗಳಲ್ಲಿ ಬಿಜೆಪಿ ಮತ್ತು ಎಸ್ಡಿಪಿಐ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಹರೀಶ್ ಪೂಜಾರಿ, ವಿನಾಯಕ ಬಾಳಿಗಾ ಹತ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿರುವುದು ಇದಕ್ಕೆ ಉದಾಹರಣೆ. ಹತ್ಯೆಗಳ ಸಂಚುಕೋರರು ಮತ್ತು ಕುಮ್ಮಕ್ಕು ನೀಡುವವರು ಹಿಂದುಳಿದ ವರ್ಗಗಳ ಯುವಕರನ್ನು ಇದಕ್ಕಾಗಿ ಬಳಸಿಕೊಂಡು ತಾವು ಸುರಕ್ಷಿತವಾಗಿರುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಮುಗ್ದತೆಯಿಂದಾಗಿ ಕೆಲವು ಜನರು ಇಂತಹ ಪಕ್ಷಗಳಿಗೆ ಮತ ನೀಡುತ್ತಾರೆ. ಆದರೆ ಬಳಿಕ ಕುಟುಂಬದ ಆಧಾರವನ್ನೇ ಕಳೆದುಕೊಳ್ಳುವಂತಾಗುತ್ತದೆ. ಕೆಲವು ಮಂದಿ ಸಮಾಜದಲ್ಲಿ ಹಿಂಸೆಯನ್ನು ಬಯಸುತ್ತಾರೆ, ಏಕೆಂದರೆ ಅವರಿಗೆ ಅದರಿಂದ ಲಾಭ ಬೇಕಾಗಿರುತ್ತದೆ. ಅಂತಹವರು ಸಾಮಾನ್ಯ ಜನರ ಮೇಲೆ ಯಾವುದೇ ಕಾಳಜಿ ಹೊಂದಿರುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರಿಂದ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಕೋಮು ಸಂಬಂಧಿ ಗಲಾಟೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ರಮಾನಾಥ ರೈ ಆಪಾದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್ ಮಾತನಾಡಿ, ವಿಪಕ್ಷ ನಾಯಕ ಸ್ಥಾನವು ಮುಖ್ಯಮಂತ್ರಿ ಸ್ಥಾನದ ನೆರಳಿದ್ದಂತೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆಯ ಹಕ್ಕಿದೆ. ಆದರೆ ಹಿಂಸೆಯ ಮುಖಾಂತರ ಪ್ರತಿಭಟನೆ ಪ್ರಜಾಪ್ರಭುತ್ವಕ್ಕೆ ಮಾರಕ. ಮೊಟ್ಟೆ ಎಸೆದ ಆರೋಪಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಈ ಘಟನೆಗೆ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿದ ಎಂಎಲ್ಸಿ ಮಂಜುನಾಥ ಭಂಡಾರಿ, ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಭಯವನ್ನು ಬಿಜೆಪಿ ಎದುರಿಸುತ್ತಿದೆ. ಚುನಾವಣೆಯಲ್ಲಿ ಬಹುಮತ ಬರುವುದಿಲ್ಲ ಎಂಬುದು ಈಗಾಗಲೇ ಅವರಿಗೆ ಗೊತ್ತಾಗಿದೆ. ಹೀಗಾಗಿ ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಕೋಮು ಸಂಬಂಧಿ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಾಲೆಟ್ ಪಿಂಟೋ, ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು.