ಕುಂದಾಪುರ, ಆ 19 (DaijiworldNews/DB): ಇಲ್ಲಿನ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಕೊಂಕಣ್ ರೈಲ್ವೆ ನಿಗಮದ ಕಾರ್ಯಾಚರಣೆ ವಿಭಾಗ ಮುಖ್ಯಸ್ಥ ಸಂತೋಷ್ ಕುಮಾರ್ ಝಾ ಶುಕ್ರವಾರ ಭೇಟಿ ನೀಡಿ, ಅಧಿಕಾರಿಗಳು ಹಾಗೂ ಪ್ರಯಾಣಿಕ ಸಮಿತಿಯೊಂದಿಗೆ ಸಭೆ ನಡೆಸಿದರು.
ಕುಂದಾಪುರದ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಹಲವು ಬೇಡಿಕೆಗಳನ್ನು ಈ ವೇಳೆ ಪ್ರಸ್ತಾಪಿಸಲಾಯಿತು. ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಈ ವೇಳೆ ಅವರು ಭರವಸೆ ನೀಡಿದರು. ಕುಂದಾಪುರದ ರೈಲು ನಿಲ್ದಾಣ, ಇಲ್ಲಿನ ಪ್ರಯಾಣಿಕರ ಹಿತದೃಷ್ಟಿಯಿಂದ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.
ಹಿಂದೆ ಇದ್ದ ಕುಂದಾಪುರ - ಮೈಸೂರು ರೈಲು ಕೊರೊನಾದ ನಂತರ ಸ್ಥಗಿತಗೊಳಿಸಿರುವುದರಿಂದ ಇಲ್ಲಿನವರಿಗೆ ಮೈಸೂರಿನ ಸಂಪರ್ಕ ಕಡಿತಗೊಂಡಿದೆ. ಕೂಡಲೇ ಮೈಸೂರು ರೈಲು ಆರಂಭಿಸಬೇಕು ಎಂದು ಒತ್ತಾಯಿಸಲಾಯಿತು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಂತೋಷ್ ಕುಮಾರ್ ಝಾ ತಿಳಿಸಿದರು.
ಕಾರವಾರ - ಕುಂದಾಪುರ- ತಿರುಪತಿಗೆ ನೇರ ರೈಲು ಕಲ್ಪಿಸಿದರೆ ಈ ಭಾಗದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಮಿತಿ ಮನವಿ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಇದಕ್ಕೆ ಕೊಂಕಣ್ ರೈಲ್ವೇ ಮಾತ್ರವಲ್ಲದೆ ಇತರೆ ನಿಗಮಗಳ ಸಹಕಾರ ಅಗತ್ಯವಿದೆ. ಹೀಗಾಗಿ ಈ ಕುರಿತು ಸಂಬಂಧಪಟ್ಟವರಲ್ಲಿ ಮಾತನಾಡಲಾಗುವುದು ಎಂದರು.
ಮುಂಬಯಿಯಿಂದ ಮಂಗಳೂರಿಗೆ ಬರುವ ನೇತ್ರಾವತಿ ಎಕ್ಸ್ಪ್ರೆಸ್ ರೈಲಿಗೆ ಕುಂದಾಪುರದಲ್ಲಿ ನಿಲುಗಡೆಯಿಲ್ಲ. ಇದರಿಂದ ಕುಂದಾಪುರ ಭಾಗದ ರೈಲ್ವೇ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಅಹವಾಲು ಕೇಳಿ ಬಂತು. ಈ ಬೇಡಿಕೆಯನ್ನು ರೈಲ್ವೆ ಮಂಡಳಿ ಗಮನಕ್ಕೆ ತರುವ ಭರವಸೆ ನೀಡಿದರು.
ಕೊಂಕಣ್ ರೈಲ್ವೆಯ ಕಾರವಾರ ಪ್ರಾದೇಶಿಕ ಕಚೇರಿಯ ಕ್ಷೇತ್ರಿಯ ಪ್ರಬಂಧಕ ಬಿ.ಬಿ. ನಿಕ್ಕಂ, ವಾಣಿಜ್ಯ ಪ್ರಬಂಧಕ ಎಲ್.ಕೆ. ವರ್ಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ಸದಸ್ಯರಾದ ಗೌತಮ್ ಶೆಟ್ಟಿ, ವಿವೇಕ್ ನಾಯಕ್, ಪ್ರವೀಣ್ ಕುಮಾರ್, ಸುಧಾಕರ ಶೆಟ್ಟಿ, ಉದಯ ಭಂಡಾರ್ಕಾರ್, ರಾಘವೇಂದ್ರ ಶೇಟ್, ನಾಗರಾಜ್ ಆಚಾರ್, ಜೋಯ್ ಕರ್ವಾಲೋ, ಪದ್ಮನಾಭ ಶೆಣೈ, ಧರ್ಮಪ್ರಕಾಶ್ ಮತ್ತಿತರರಿದ್ದರು.