ಕುಂದಾಪುರ, ಆ 19(DaijiworldNews/HR): ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಕೊಡಗು ಜಿಲ್ಲೆಗೆ ತೆರಳಿದ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊಡಗಿನಲ್ಲಿ ಪದೇಪದೇ ಆಗುತ್ತಿರುವ ಭೂ ಕುಸಿತಕ್ಕೆ ಸೂಕ್ತ ಅನ್ವೇಷಣೆ ಮಾಡಿ ಕಾರಣ ಕಂಡು ಹಿಡಿಯಲು ವಿಫಲವಾಗಿರುವ ಸರಕಾರದ ನೀತಿಯಿಂದ ಅಲ್ಲಿನ ಜನ ರೋಸಿ ಹೋಗಿದ್ದು, ಪ್ರಾಕ್ರತಿಕ ವಿಕೋಪ ಮತ್ತು ಇತರ ಸರಕಾರಿ ಅನುದಾನದಿಂದ ಕಳಪೆ ಕಾಮಗಾರಿ ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಗಳು ರಾಜ್ಯದ ಜನತೆಯ ಮುಂದಿಡುತ್ತಾರೆಂದು ಹತಾಷೆಯಿಂದ ಬಿಜೆಪಿಯವರು ಈ ರೀತಿ ಹೇಡಿ ಮತ್ತು ನೀಚ ಕೃತ್ಯಕ್ಕೆ ಇಳಿದಿರುತ್ತಾರೆ ಎಂದರು.
ಇದು ರಾಜ್ಯ ಸರಕಾರದ ಭದ್ರತಾ ವೈಫಲ್ಯ. ಗುಪ್ತಚರ ಮತ್ತು ಗ್ರಹ ಇಲಾಖೆ ನಿಷ್ಕ್ರೀಯವಾಗಿದೆ. ತಮ್ಮ ಕಳಪೆ ಮತ್ತುಕಮೀಷನ್ ಕಾಮಗಾರಿ ಮುಚ್ಚಿಹಾಕಲು ಈ ರೀತಿ ಬಾಡಿಗೆ ಗೂಂಡಾಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇರುವ ಮೂಲಭೂತ ಹಕ್ಕನ್ನು ರಾಜ್ಯ ಬಿಜೆಪಿ ಸರಕಾರ ಕಸಿದುಕೊಳ್ಳುತ್ತಿದೆ ಎಂದಿದ್ದಾರೆ.
ಇನ್ನು ರಾಜ್ಯದ ಬಿಜೆಪಿ ಸರಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದ್ದು ದಾವಣಗೆರೆಯ ಸಿದ್ದರಾಮಯ್ಯ ಅಮೃತ ಮಹೋತ್ರವ ಕಾರ್ಯಕ್ರಮ ಮತ್ತು ಬೆಂಗಳೂರಿನಲ್ಲಿ ನೆಡೆದ ಸ್ವಾತಂತ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ನೋಡಿ ಹತಾಷರಾಗಿ ಬಿಜೆಪಿಯವರು ಈ ರೀತಿ ಕೃತ್ಯಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೇಸಿದ್ದಾರೆ.
ಈ ಘಟನೆ ಬಗ್ಗೆ ಮುಖ್ಯಮಂತ್ರಿ ಮತ್ತು ಗ್ರಹ ಸಚಿವರಿಂದ ನ್ಯಾಯ ಸಿಗುವ ವಿಶ್ವಾಸ ನಮಗಿಲ್ಲ. ಆದ್ದರಿಂದ ಕೂಡಲೇ ರಾಜ್ಯಪಾಲರು ಮದ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.