ಮಂಗಳೂರು, ಆ 18 (DaijiworldNews/SM): ಕೆಎಂಎಫ್ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ಬರೋಬ್ಬರಿ 150 ಜನರಿಗೆ 2.50 ಕೋಟಿ ರೂಪಾಯಿಗೂ ಹೆಚ್ಚು ಪಂಗನಾಮ ಹಾಕಿದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ರಾಮ್ಪ್ರಸಾದ್ ಯಾನೆ ಹರೀಶ್ ಬಂಧಿತ ಆರೋಪಿಯಾಗಿದ್ದಾನೆ.
ರಾಮ್ಪ್ರಸಾದ್ ಯಾನೆ ಹರೀಶ್ ನನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರ ನೇತೃತ್ವದಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರಿಗೊಪ್ಪಿಸಿದ್ದಾರೆ.
ರಾಮ್ಪ್ರಸಾದ್ ಯಾನೆ ಹರೀಶ್ ತಾನು ಕೆ ಎಂಎಫ್ ನಿರ್ದೇಶಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಅಮಾಯಕರಿಗೆ ಕೆಎಂಎಫ್ ಮಂಗಳೂರು ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ವಂಚಿಸಿದ್ದಾನೆ. ಅಲ್ಲದೆ ಕೆಎಂಎಫ್ ಹೆಸರಿನಲ್ಲಿ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಪುತ್ತೂರು ಮತ್ತು ಮಂಗಳೂರಿನ ಉರ್ವಾದಲ್ಲಿ 15 ದಿನಗಳ ಟ್ರೈನಿಂಗ್ ಕೊಟ್ಟಿದ್ದಾನೆ. ಕೆಲವರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ. ಈತ ಪ್ರತೀ ವ್ಯಕ್ತಿಯಿಂದ ಕಡಿಮೆ ಎಂದರೆ 50 ಸಾವಿರದಿಂದ ಹಿಡಿದು 3.50 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡಿದ್ದಾನೆ.
ಅದು ಗೂಗಲ್ ಪೇ, ಕ್ಯಾಶ್, ಬ್ಯಾಂಕ್ ಟ್ರಾನ್ಸಫರ್ ಸೇರಿ ಹಲವು ವಿಧಗಳಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕ್ರಿಮಿನಲ್ ಆರೋಪಿಯ ವಂಚನೆ ತಿಳಿಯದ ಹಲವಅರ ಅಮಾಯಕರು ಮೋಸ ಹೋಗಿದ್ದಾರೆ. ಇಷ್ಟೆ ಅಲ್ಲದೆ ಅಮಾಯಕ ನಿರುದ್ಯೋಗಿ ಯುವತಿಯರಿಗೂ ವಂಚನೆ ಮಾಡಿದ್ದಾರೆ. ಹಲವು ಮಂದಿಯಿಂದ ದುಡ್ಡು ಪಡೆದುಕೊಂಡು ಯುವತಿಯರನ್ನು ಬ್ಲ್ಯಾಕ್ ಮೇಲ್ ಕೂಡಾ ಮಾಡುತ್ತಿದ್ದ. ಬೆಂಗಳೂರಿನ ಕೆಎಂಎಫ್ಗೂ ಡೈರಿಗೆ ಕೆಲ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಕೆಲಸದ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ. ನೂರಾರು ಅಮಾಯಕರು ಈ ಮಹಾ ಮೋಸಗಾರನಿಂದ ವಂಚನೆಯಾಗಿದ್ದುದ್ದನ್ನು ತಿಳಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ಪೂರ್ಣ ಮಾಹಿತಿ ಪಡೆದು ಆತನನ್ನು ಕರೆಸಿಕೊಂಡು ವಿಷಯ ಕೇಳಿದಾಗ ವಂಚನೆಯನ್ನು ಬಾಯ್ಬಿಟ್ಟಿದ್ದಾನೆ.