ಬೈಂದೂರು, ಆ 18 (DaijiworldNews/DB): ಅಗತ್ಯ ಮೂಲಭೂತ ಸೌಲಭ್ಯಗಳಿದ್ದಲ್ಲಿ ಹಳ್ಳಿಗಳು ಉದ್ದಾರವಾಗುತ್ತವೆ. ಆದರೆ ಇಲ್ಲೊಂದು ಹಳ್ಳಿ ಅಂತಹ ಸೌಲಭ್ಯಗಳ ಮುಖವನ್ನೇ ನೋಡಿಲ್ಲ. ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ, ಅಂಗನವಾಡಿ, ಶಾಲೆ ಮುಂತಾದ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿರುವ ಈ ಹಳ್ಳಿಯ ಜನರ ಸಂಕಷ್ಟ ಹೇಳತೀರದು.
ಹೌದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹುಣಸೆ ಮಕ್ಕಿ ಎಂಬ ಗ್ರಾಮದ ಜನರು ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ.
ಹುಣಸೇ ಮಕ್ಕಿಯಲ್ಲಿ ಸುಮಾರು 70 ಕುಟುಂಬಗಳಿದ್ದು, ಒಟ್ಟಾರೆ 500ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ನೂರರಷ್ಟು ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಮಕ್ಕಳ್ಯಾರೂ ಅಂಗನವಾಡಿಯತ್ತ ಮುಖ ಮಾಡಿಲ್ಲ. ಯಾಕೆಂದರೆ ಇಲ್ಲಿ ಅಂಗನವಾಡಿಯೇ ಇಲ್ಲ.! ಒಂದೊಮ್ಮೆ ಅಂಗನವಾಡಿಗೆ ಹೋಗಬೇಕೆಂದರೆ ಅಪಾಯಕಾರಿ ಮರದ ಕಾಲುಸಂಕಗಳನ್ಬು ದಾಟಿ ಎರಡು ಕಿ.ಮೀ ದೂರ ನಡೆದೇ ಸಾಗಬೇಕು. ಇನ್ನು ಶಾಲೆಗೆ ಹೋಗಬೇಕೆಂದರೆ ಬೆಳಗ್ಗೆ 7.30ಕ್ಕೆ ನಡೆಯಲಾರಂಭಿಸಿದರೆ ಐದು ಕಿ.ಮೀ ಸಾಗಿ ಶಾಲೆ ಸೇರಬೇಕಾದ ಪರಿಸ್ಥಿತಿ. ಸಂಜೆಯೂ ಮನೆಗೆ ಬರುವ ಸಮಯ ಹೇಳಲಾಗದು.
ಕುಡಿಯುವ ನೀರಿಗೆ ಸಂಕಷ್ಟ
ಸರ್ಕಾರ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಈ ಹಳ್ಳಿಗೆ ಒದಗಿಸಿಕೊಟ್ಟಿಲ್ಲ. ಬೇಸಿಗೆಯಲ್ಲಂತೂ ಈ ಕುಟುಂಬಗಳ ಪರಿಸ್ಥಿತಿ ಹೇಳತೀರದು. ವಿದ್ಯುತ್ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ರಾತ್ರಿ ದೀಪದ ಬೆಳಕೇ ಗತಿ. ದೀಪ ಹಚ್ಚಲು ಸೀಮೆ ಎಣ್ಣೆಯ ಲಭ್ಯತೆಯೂ ಈ ಹಳ್ಳಿಗಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ರಸ್ತೆಗಿಲ್ಲ ಸ್ಪಂದನೆ
ಹಳ್ಳಿಯ ರಸ್ತೆಯ ಸ್ಥಿತಿಯಂತೂ ದೇವರಿಗೇ ಪ್ರಿಯ. ಹಲವು ವರ್ಷಗಳಿಂದ ಇಲ್ಲಿನ ಜನರು ರಸ್ತೆಗಾಗಿ ಹೋರಾಡಿದ್ದಾರೆ. ಮನವಿ ಮಾಡದ ಇಲಾಖೆಗಳಿಲ್ಲ; ಜನಪ್ರತಿನಿಧಿಗಳಿಲ್ಲ. ಆದರೆ ಸ್ಪಂದನೆ ಮಾತ್ರ ಶೂನ್ಯ! ಕೆಲವು ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಮನವಿ ಮಾಡಿದ್ದಾರೆ. ಆದರೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹುಣಸೆಮಕ್ಕಿ ಗ್ರಾಮಸ್ಥರು.
ಗರ್ಭಿಣಿಯರಿಗೆ ನೆಂಟರ ಮನೆಯೇ ಗತಿ
ಆರೋಗ್ಯದ ಸಮಸ್ಯೆಯಾದರೆ ಹೊತ್ತುಕೊಂಡೋ, ಕಂಬಳಿ ಹಾಸಿಯೋ ಹೊತ್ತುಕೊಂಡು ಹೋಗಬೇಕಾದ ಸ್ಥಿತಿ. ಗರ್ಭಿಣಿಯರನ್ನು ಪೇಟೆ ಸಮೀಪದ ನೆಂಟರ ಮನೆಯಲ್ಲಿ ಹೆರಿಗೆಯಾಗುವ ತನಕ ಬಿಡಬೇಕಾದ ದುಸ್ಥಿತಿ! ಯಳಿಜಿತ್ ಸಮೀಪದ ತೊಂಡ್ಲೆಯಿಂದ ಕಾಶೀಕೊಡ್ಲುವಿಗೆ ಸುಮಾರು 5 ಕಿ.ಮಿ. ತನಕ ಕಲ್ಲು ಮಣ್ಣುಗಳಿಂದ ಕೂಡಿದ ರಸ್ತೆಯಲ್ಲಿ ವಾಹನದಲ್ಲಿ ಹೋಗುವುದು ಬಿಡಿ, ನಡೆದಾಡಲೂ ಅಸಾಧ್ಯ. ಆರೋಗ್ಯಾಧಿಕಾರಿಗಳು, ಪಶು ವೈದ್ಯರ ಕಾಲಿಗೆ ಬಿದ್ದರೂ ಈ ಊರಿಗೆ ಬರಲು ಒಪ್ಪುವುದಿಲ್ಲ.
ಇಷ್ಟೆಲ್ಲಾ ಸಮಸ್ಯೆಗಳು ಈ ಊರಿನಲ್ಲಿದ್ದರೂ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಇದೆಲ್ಲದರಿಂದ ರೋಸಿ ಹೋಗಿರುವ ಹುಣಸೆಮಕ್ಕಿಯ ಜನ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ. ರಾಜಕಾರಣಿಗಳನ್ನು ಊರೊಳಗೆ ಬಿಡುವುದಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿ ಸುರೇಂದ್ರ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಊರಿಗೆ ಸಿಗಬೇಕಾದ ಸವಲತ್ತು ಒದಗಿಸಬಲ್ಲರೇ ಕಾದು ನೋಡಬೇಕಿದೆ.