ಉಡುಪಿ, ಆ 18 (DaijiworldNews/DB): ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವಂತೆ ಕೋರಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅವರು ನಗರದ ಪುರಸಭೆಗೆ ಪತ್ರ ಬರೆದಿದ್ದಾರೆ.
ಬ್ರಹ್ಮಗಿರಿ ವೃತ್ತದಲ್ಲಿ ಅಳವಡಿಸಿರುವ ಫ್ಲೆಕ್ಸ್ನಲ್ಲಿ ಸಾವರ್ಕರ್ ಫೋಟೋ ಮುದ್ರಿಸಿರುವುದಕ್ಕೆ ಕಾಂಗ್ರೆಸ್ ಮತ್ತು ಎಸ್ಡಿಪಿಐ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಎಸ್ಡಿಪಿಐಗೆ ಸವಾಲು ಹಾಕಿರುವ ಯಶ್ಪಾಲ್ ಸುವರ್ಣ, ಉಭಯ ಪಕ್ಷಗಳು ಸಾವರ್ಕರ್ ಫೋಟೋ ವಿರೋಧಿಸುವುದನ್ನು ಮುಂದುವರಿಸಿದಲ್ಲಿ ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಪ್ರತಿಮೆ ಅಳವಡಿಸಲಾಗುವುದು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷರು ಮತ್ತು ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ.
ವಿನಾಯಕ ದಾಮೋದರ ಸಾವರ್ಕರ್ ಅವರು ಭಾರತದ ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಅವರ ಗೌರವಾರ್ಥ ಎಲ್ಲಾ ದೇಶಭಕ್ತರ ಪರವಾಗಿ ಸಾವರ್ಕರ್ ಪ್ರತಿಮೆಯನ್ನು ಬ್ರಹ್ಮಗಿರಿ ವೃತ್ತದಲ್ಲಿ ಸ್ಥಾಪಿಸಲು ನಾವು ಉದ್ದೇಶಿಸಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದೇಶ 75ನೇ ವರ್ಷದ ಸ್ವಾತಂತ್ರ ಸಂಭ್ರಮದಲ್ಲಿರುವಾಗ ಬ್ರಿಟಿಷರನ್ನು ಹಿಮ್ಮೆಟ್ಟಿಸುವಲ್ಲಿ ತೊಡಗಿಸಿಕೊಂಡ ವೀರ್ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ಇದೇ ಸರಿಯಾದ ಸಮಯವಾಗಿದೆ. ಹೀಗಾಗಿ ವೀರ್ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ಪುರಸಭೆಯಿಂದ ಅನುಮತಿ ನೀಡಬೇಕೆಂದು ಉಡುಪಿಯ ದೇಶಭಕ್ತ ಸಾರ್ವಜನಿಕರ ಪರವಾಗಿ ನಾನು ಮನವಿ ಮಾಡುತ್ತೇನೆ ಎಂದು ಕೋರಿದ್ದಾರೆ.