ಉಳ್ಳಾಲ, ಫೆ 01(SM): ಸಾರ್ವಜನಿಕವಾಗಿ ಸಿಗರೇಟು ಸೇದುವುದನ್ನು ಆಕ್ಷೇಪಿಸಿದ ಉಳ್ಳಾಲದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೋರ್ವರ ಮೇಲೆ ಇಬ್ಬರ ತಂಡ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಉಳ್ಳಾಲ ಠಾಣೆಯ ಪೇದೆ ಮಾಣಿಕ್ ನರೇನವರ್ ಹಲ್ಲೆಗೊಳಗಾದವರು. ತೊಕ್ಕೊಟ್ಟು ಒಳಪೇಟೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಂದರ್ಭ ಆಕ್ಟಿವಾ ಸ್ಕೂಟರಿನಲ್ಲಿ ಬಂದ ಇಬ್ಬರು ಯುವಕರ ತಂಡ ಅಂಗಡಿಯಿಂದ ಸಿಗರೇಟು ಪಡೆದು ಸಾರ್ವಜನಿಕವಾಗಿ ಸೇದಲು ಮುಂದಾಗಿದ್ದರು.
ಇದನ್ನು ಪೇದೆ ಮಾಣಿಕ್ ಆಕ್ಷೇಪಿಸಿದ್ದಾರೆ. ಇದರಿಂದ ಕೆರಳಿದ ಇಬ್ಬರು ಯುವಕರು ಪೇದೆ ಮಾಣಿಕ್ ಜತೆಗೆ ಮಾತಿಗಿಳಿದು ಕೈ, ಎದೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಬಳಿಕ ಇಬ್ಬರು ಸ್ಥಳದಿಂದ ಅಳೇಕಲ ಕಡೆಗೆ ಪರಾರಿಯಾಗಿದ್ದಾರೆ.
ಸ್ಕೂಟರಿನ ನೋಂದಣಿ ಸಂಖ್ಯೆಯನ್ನು ದಾಖಲಿಸಿರುವ ಪೊಲೀಸರು ಅದನ್ನು ಮುಂದಿಟ್ಟು ಇಬ್ಬರ ವಿರುದ್ಧ ಕರ್ತವ್ಯ ಕ್ಕೆ ಅಡ್ಡಿ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.