ಕುಂದಾಪುರ, ಆ 18 (DaijiworldNews/MS): ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ ರಿ., ಕರ್ನಾಟಕ, ಕೇರಳ ಇದರ ನೇತೃತ್ವದಲ್ಲಿ ಕುಂದಾಪುರದ ಅಂಬೇಡ್ಕರ್ ಸಭಾಭವನದಲ್ಲಿ ನಡೆದ 14ನೇ ಭೂಮಿ ಹಬ್ಬ ನಡೆಯಿತು.
ಕಾರ್ಯಕ್ರಮವನ್ನು ಡೋಲು ಭಾರಿಸುವ ಮೂಲಕ ಉದ್ಘಾಟನೆ ಮಾಡಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಕೊರಗ ಸಮುದಾಯ ಭೂಮಿಗಾಗಿ ಸಾಕಷ್ಟು ಹೋರಾಟ ನಡೆಸಿದೆ. ಸುಮಾರು 450 ಎಕ್ರೆ ಸ್ಥಳ ಹೋರಾಟದಿಂದ ಪಡೆದಿದೆ. ಹಲವಾರು ಮಂದಿ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಇವತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ಈ ಸಮುದಾಯದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶೈಕ್ಷಣಿಕವಾಗಿ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಲೋನಿಗಳಲ್ಲಿ ಟ್ಯೂಶನ್ ಸೆಂಟರ್ಗಳನ್ನು ಆರಂಭಿಸಿ ಮನೆಯ ಸಮೀಪವೇ ಟ್ಯೂಶನ್ ನೀಡಲು ಆರಂಭಿಸಲಾಗಿದೆ ಎಂದರು.
ಶಿರಿಯಾರ ಗ್ರಾಮ ವ್ಯಾಪ್ತಿಯಲ್ಲಿ ಮಂಜೂರಾತಿಯಾದ ಭೂಮಿಗೆ ಹಕ್ಕು ಪತ್ರ ತೊಡಕ್ಕಿರುವ ಸಮಸ್ಯೆಗಳನ್ನು ತಕ್ಷಣವೇ ತಹಶೀಲ್ದಾರರಲ್ಲಿ ಚರ್ಚಿಸಿ , ಹಕ್ಕುಪತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಅಮ್ಮಣಿ ಕೊರಗ ಅಬ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಧ್ವಜಾರೋಹಣ ನೆರವೇರಿಸಿದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಪ್ರಸನ್ನ ತೆಂಗಿನ ಸಸಿಗೆ ನೀರೇರೆಯುವ ಮೂಲಕ ಚಾಲನೆ ನೀಡಿದರು. ಸಮಾಜದ ಹಿರಿಯ ಮಹಿಳೆ ಗೌರಿ ಕೊರಗ ಹಬ್ಬದ ಜ್ಯೋತಿ ಬೆಳಗಿಸಿದರು.
ಮಂಗಳೂರು ವಿವಿಯ ಅಸಿಸ್ಟೆಂಟ್ ಪ್ರೊಪೆಸರ್ ಡಾ.ಸಬಿತಾ ಗುಂಡ್ಮಿ, ಐಟಿಡಿಪಿಯ ಯೋಜನಾ ಸಮನ್ವಯಾಧಿಕಾರಿ ದೂದ್ ಫೀರ್, ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುಡೇಶ್ವರ, ಸಮಾಜ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಣೇಕರ್, ಕೊರಗ ಅಭಿವೃದ್ದಿ ಸಂಘ ಕುಂದಾಪುರ ವಲಯ ಅಧ್ಯಕ್ಷ ಶೇಖರ ಕೊರಗ, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ದೋಗ್ರ ಕೊರಗ, ಶೋಭಾ ಬಂಟ್ವಾಳ, ಗೋಪಾಲ ಕಾಸರಗೋಡು, ಸುರೇಶ ಪುತ್ತೂರು, ಭೂಮಿ ಹಬ್ಬದ ಉಸ್ತುವಾರಿ ಸಮಿತಿ ಅಧ್ಯಕ್ಷ, ಪುರಸಭಾ ಸದಸ್ಯ ಪ್ರಭಾಕರ ವಿ ಉಪಸ್ಥಿತರಿದ್ದರು.
ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪುತ್ರನ್ ಹೆಬ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊರಗ ಅಭಿವೃದ್ದಿ ಸಂಘ ಕೊಕ್ಕರ್ಣೆ ಕಾರ್ಯದರ್ಶಿ ಸುಚಿತ್ರಾ ವಂದಿಸಿದರು. ಸುನಂದಾ ಮತ್ತು ತಂಡ ದ್ಯೇಯಗೀತೆ ಹಾಡಿದರು. ಸುರೇಂದ್ರ ಕಳ್ತೂರು, ವಿಮಲಾ ಕಳ್ತೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮೊದಲು ಕುಂದಾಪುರ ನಗರದಲ್ಲಿ ಜಾಥಾ ನಡೆಯಿತು.