ಕಾರ್ಕಳ, ಫೆ 01(SM): ಪುರಸಭೆ ವ್ಯಾಪ್ತಿಯ ಹೃದಯ ಭಾಗದ ಮಾರ್ಕೆಟ್ ರಸ್ತೆ ಅಭಿವೃದ್ಧಿ ಕಾಮಗಾರಿಯ ವಿಳಂಬವನ್ನು ಖಂಡಿಸಿ ಸ್ಥಳೀಯ ಪುರಸಭಾ ಸದಸ್ಯ ಶುಭದರಾವ್ ನೇತೃತ್ವದಲ್ಲಿ ನಾಗರಿಕರು ಭಾರೀ ಪ್ರತಿಭಟನೆ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆದಿದೆ.
ಕರ್ನಾಟಕ ನಗರೋತ್ಹಾನ ನಿಧಿಯಿಂದ ಮಾರ್ಕೇಟ್ ರಸ್ತೆಯ ಅಭಿವೃದ್ದಿಗೆ ಅನುದಾನ ಬಿಡುಗಡೆಗೊಂಡಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿ ಆರಂಭಗೊಂಡಿದ್ದರೂ, ಪ್ರಸ್ತುತ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ನಾಗರಿಕರು ಹಲವು ಸಂಕಷ್ಟಗಳನ್ನು ಎದುರಿಸಿದ್ದರು.
ವಾಹನ ಸಂಚಾರ ವ್ಯವಸ್ಥೆಯಿಲ್ಲದೇ ಹೋದುದರಿಂದ ವ್ಯಾಪಾರಿಗಳ ವ್ಯವಹಾರದ ಮೇಲೆ ದುಷ್ಪರಿಣಾಮ ಬೀರಿದೆ. ಪರಿಸರ ಸಂಪೂರ್ಣ ಹದಗೆಟ್ಟಿರುವುದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯ ಏರು ಪೇರಾಗಿದೆ.
ಚರಂಡಿ ಕಾಮಗಾರಿ ಪೂರ್ಣಗೊಳ್ಳದ, ಚರಂಡಿ ಮೇಲೆ ಕಲ್ಲು ಹಾಸದೆ ಅಪಾಯವನ್ನು ಎದುರಿಸುವಂತಾಗಿದೆ. ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣವಾಗುತ್ತಿದೆ.
ಮಾರ್ಕೇಟ್ ರಸ್ತೆಯ ರಿಕ್ಷಾ ನಿಲ್ದಾಣದಿಂದ ಪುರಸಭೆಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಅವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ಜಿಲ್ಲಾಧಿಕಾರಿಗಳ ಗಮನ ಸೆಳೆಯುವ ಮೂಲಕ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಲಾಯಿತು.