ಮಂಗಳೂರು, , ಆ 18 (DaijiworldNews/MS): ನಗರದ ಕಾನೂನು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ಮಂಗಳೂರಿನ ಜೆಎಂಎಫ್ಸಿ 3ನೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
2021ರ ಸೆ.25ರಂದು ಮಧ್ಯಾಹ್ನ ರಾಜೇಶ್ ತನ್ನ ಮಂಗಳೂರಿನ ಕರಂಗಲ್ಪಾಡಿಯ ಕಚೇರಿಯಲ್ಲಿ ಇಂಟರ್ನ್ಶಿಪ್ಗೆಂದು ಬಂದಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ತಪ್ಪಿಸಿಕೊಂಡು ಹೋಗಿದ್ದಳು. ಈ ಸಂದರ್ಭ ರಾಜೇಶ್ ಭಟ್ ಆಕೆಗೆ ಜೀವ ಬೆದರಿಕೆ ಹಾಕಿದ್ದ. ಅಲ್ಲದೆ ಕೃತ್ಯದ ಬಗ್ಗೆ ದೂರಿನ ವಿಚಾರವನ್ನು ಮುಕ್ತಾಯಗೊಳಿಸುವಂತೆ ಮಂಗಳೂರಿನ ವಕೀಲರ ಬಾರ್ ಅಸೋಸಿಯೇಶನ್ನ ಅಧ್ಯಕ್ಷರಿಗೆ ಒತ್ತಾಯದಲ್ಲಿ ಪತ್ರವನ್ನು ಬರೆಯಿಸಿಕೊಂಡು ಸಹಿ ಪಡೆದುಕೊಂಡಿದ್ದ. ಬಳಿಕ ಕೃತ್ಯವನ್ನು ಮರೆ ಮಾಚುವ ಉದ್ದೇಶದಿಂದ ವಿದ್ಯಾರ್ಥಿನಿಯ ಗೆಳತಿಯಿಂದ ಒತ್ತಾಯದಲ್ಲಿ ಸಹಿ ಪಡೆದುಕೊಂಡಿದ್ದ. ಕೃತ್ಯದ ಕುರಿತು ಆಡಿಯೋ ಪ್ರಸಾರ ಮಾಡಿರುವ ಬಗ್ಗೆಯೂ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಒತ್ತಾಯದಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಎಂಬುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ರಾಜೇಶ್ ತನ್ನ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಮೊಬೈಲ್ಗೆ ಸಂಪರ್ಕಿಸಿಕೊಂಡಿದ್ದ. ಅದರ ಮೂಲಕ ವಿದ್ಯಾರ್ಥಿನಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದುದನ್ನು ಕೂಡ ಲೈಂಗಿಕ ಉದ್ದೇಶದಿಂದ ನೋಡುತ್ತಿದ್ದ. ಅಲ್ಲದೆ ಆತ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಆತನಿಗೆ ಅನಂತ ಭಟ್ ಮತ್ತು ಅಚ್ಚುತ್ತ ಭಟ್ ನೆರವು, ಆಶ್ರಯ ಒದಗಿಸಿದ್ದರು ಎಂದು ದೋಷಾರೋಪಣಾ ಪತ್ರದಲ್ಲಿ ತಿಳಿಸಲಾಗಿದೆ. ಒಟ್ಟು 110 ಮಂದಿ ಸಾಕ್ಷಿದಾರರನ್ನಾಗಿ ತೋರಿಸಲಾಗಿದೆ.
ಎಸಿಪಿಯಿಂದ ಚಾರ್ಜ್ಶೀಟ್ ಸಲ್ಲಿಕೆ : ಪ್ರಕರಣದ ಗಂಭೀರತೆ ಪರಿಗಣಿಸಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತನಿಖೆಯನ್ನು ಅಂದಿನ ಎಸಿಪಿ ರಂಜಿತ್ ಬಂಡಾರು ಅವರಿಗೆ ವಹಿಸಿದ್ದರು. ಅನಂತರ ಎಸಿಪಿ ದಿನಕರ ಶೆಟ್ಟಿ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ