ಕುಂದಾಪುರ, ಆ 17 (DaijiworldNews/SM): ಕೇರಳದಲ್ಲಿ ಬಂಧಿತರಾದ ನಕ್ಸಲ್ವಾದಿಗಳಾದ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದ ಬಿ.ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಯಾನೆ ರೆಜಿತಾ ಅವರನ್ನು ಬುಧವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರ ಮೇಲಿನ ಪ್ರಕರಣಗಳ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಶಂಕರನಾರಾಯಣ ಠಾಣಾ ವ್ಯಾಪ್ತಿಯ ೬ ಹಾಗೂ ಕೊಲ್ಲೂರು ಠಾಣೆ ವ್ಯಾಪ್ತಿಯ ೧ ಪ್ರಕರಣದ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಆದರೆ ಇವುಗಳಲ್ಲಿನ ಅಪರಾಧಗಳ ಸೆಕ್ಷನ್ಗಳು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಯಾಗಬೇಕಿರುವುದರಿಂದ ೭ ಪ್ರಕರಣಗಳನ್ನು ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ನೀಡಲಾಯಿತು.
ಬಿ.ಜಿ. ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿ ತನ್ನನ್ನು ಕರ್ನಾಟಕದ ಜೈಲಿನಲ್ಲಿ ಇರಿಸಬೇಕೆಂದು ಕೇಳಿಕೊಂಡ. ಕೇರಳದಲ್ಲಿ ಇರುವ ೪ ಪ್ರಕರಣಗಳ ಪೈಕಿ ಒಂದರಲ್ಲಿ ಜಾಮೀನು ಮಂಜೂರಾಗಿದ್ದು ಉಳಿದವುಗಳ ವಿಚಾರಣೆಗೆ ಕರ್ನಾಟಕದಿಂದ ಹೋಗಿ ಬರಬಹುದು. ಕರ್ನಾಟಕದಲ್ಲಿ ಹೆಚ್ಚಿನ ಪ್ರಕರಣಗಳು ಇರುವ ಕಾರಣ ಕರ್ನಾಟಕದ ಜೈಲಿನಲ್ಲಿ ಇರಿಸಬೇಕೆಂದು ಮನವಿ ಮಾಡಿದ್ದ. ಆದರೆ ನ್ಯಾಯಾಲಯ ಸದ್ಯಕ್ಕೆ ಅದನ್ನು ಪುರಸ್ಕರಿಸಲಿಲ್ಲ.