ಮಂಗಳೂರು, ಆ 17 (DaijiworldNews/DB): ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಗುರುತಿನ ಚೀಟಿಗೆ (ಎಪಿಕ್) ಆಧಾರ್ ಲಿಂಕ್ ಮಾಡುವ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಇಲಾಖೆಗಳು ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ನಿರ್ದೇಶನ ನೀಡಿದ್ದಾರೆ.
ಆ.17ರ ಬುಧವಾರ ಈ ಕುರಿತು ಹಮ್ಮಿಕೊಂಡಿದ್ದ ಸಭೆ ಹಾಗೂ ವಿಡಿಯೋ ಸಂವಾದದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಎಪಿಕ್ ಕಾರ್ಡ್ಗೆ ಆಧಾರ್ ಅಥವಾ ಅದನ್ನು ಹೊರತು ಪಡಿಸಿ ನಿಗದಿಪಡಿಸಿದ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ಬುಕ್, ಆರೋಗ್ಯ ವಿಮೆ, ಚಾಲನಾ ಪರವಾನಗಿ, ಪಾನ್ ಕಾರ್ಡ್, ಎನ್ಪಿಆರ್ನಡಿ ನೀಡಲಾದ ಸ್ಮಾರ್ಟ್ ಕಾರ್ಡ್, ಪಾಸ್ ಪೋರ್ಟ್, ಪಿಂಚಣಿ ದಾಖಲಾತಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ ನೌಕರರ ಗುರುತಿನ ಚೀಟಿ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ನೀಡಿದ ಅಧಿಕೃತ ಗುರುತಿನ ಚೀಟಿ ಸೇರಿದಂತೆ ಒಟ್ಟು 11 ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಜೋಡಿಸಬೇಕು. ಈ ಪ್ರಕ್ರಿಯೆಯನ್ನು ಸಿಬಂದಿಗೆ ತಿಳಿಸಿಕೊಡಲು ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಬೇಕು, ಸಿಬಂದಿಗಳ ಎದುರಿಗೆ ಅಧಿಕಾರಿಗಳು ತಮ್ಮ ಎಪಿಕ್ ಕಾರ್ಡ್ಗೆ ಆಧಾರ್ನ್ನು ಲಿಂಕ್ ಮಾಡಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಕೂಡಲೇ ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಅದನ್ನು ಮಾಡದಿದ್ದಲ್ಲಿ ಮುಂದೆ ಹಮ್ಮಿಕೊಳ್ಳುವ ನೇರ ಸಭೆಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಹಕಾರಿ ಸಂಘಗಳ ಸೊಸೈಟಿಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಬರುವ ಸದಸ್ಯರಿಗೆ, ಅಬಕಾರಿ ಉಪ ಆಯುಕ್ತರು ತಮ್ಮ ಅಧೀನದಲ್ಲಿರುವ ವೈನ್ ಶಾಪ್ಗಳ ಮಾಲೀಕರು, ಸಿಬಂದಿಗೆ, ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಮಾಲಿಕರು, ಚಾಲಕರು, ನಿರ್ವಾಹಕರು, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಎಲ್ಲಾ ಸರ್ಕಾರಿ, ಖಾಸಗಿ, ಸ್ವಾಯುತ್ತ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಶೇಷ ಅಭಿಯಾನ ಹಮ್ಮಿಕೊಂಡು ಎಪಿಕ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವ ಕಾರ್ಯಕ್ಕೆ ವೇಗ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಮೀನುಗಾರಿಕಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಎಲ್ಲಾ ಮೀನುಗಾರರಿಗೆ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ ಆರೋಗ್ಯ ಕೇಂದ್ರಗಳು, ಅಲ್ಲಿನ ಸಿಬಂದಿ, ಮೆಸ್ಕಾಂನವರು ತಮ್ಮ ಎಲ್ಲಾ ಸಿಬಂದಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು- ಪುತ್ತೂರು ವಿಭಾಗದ ಮ್ಯಾನೇಜರ್ಗಳು ಅಲ್ಲಿನ ಸಿಬಂದಿ, ಚಾಲಕರು, ನಿರ್ವಾಹಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಮ್ಮ ಇಲಾಖೆ ವ್ಯಾಪ್ತಿಯ ಸಿಬಂದಿಗೆ ಸೇರಿದಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮ್ಮ ತಮ್ಮ ಅಧಿಕಾರಿಗಳು ಹಾಗೂ ಸಿಬಂದಿಗಳ ಎಪಿಕ್ ಕಾರ್ಡ್ಗೆ ಆಧಾರ್ ಜೋಡಣೆ ಮಾಡುವ ಕಾರ್ಯದಲ್ಲಿ ಕೂಡಲೇ ತೊಡಗಿಕೊಳ್ಳಬೇಕು. ಇಲ್ಲಿ ಮುಖ್ಯವಾಗಿ ಆಧಾರ್ ರಹಿತವಾಗಿ ನೀಡಲಾದ ಇತರೆ ಹನ್ನೊಂದು ದಾಖಲಾತಿಗಳನ್ನು ಜೋಡಿಸಬಹುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ಗಳಿಗೆ ಆಧಾರ್ ಜೋಡಿಸಲು ನಿರ್ದೇಶನ ನೀಡಲಾಗಿದೆ. ಆ ಮೂಲಕ ನೋಂದಣಿಯನ್ನು ಹೆಚ್ಚು ಮಾಡಲಾಗುವುದು ಎಂದು ತಿಳಿಸಿದರು.
ಆ.21ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಎಲ್ಲಾ ಬಿಎಲ್ಒಗಳು ಮತಗಟ್ಟೆಯಲ್ಲಿ ಹಾಜರಿದ್ದು, ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ಮತಗಟ್ಟೆ ಏಜೆಂಟರೊಂದಿಗೆ 6ಬಿ ಸಂಬಂಧಿಸಿದಂತೆ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಎಪಿಕ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಂಡು ಮತದಾರರರನ್ನು ನೋಂದಾಯಿಸುವಂತೆ ಅವರು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ಮದನ್ ಮೋಹನ್, ಗಿರೀಶ್ ನಂದನ್ ಮತ್ತಿತರರು ಉಪಸ್ಥಿತರಿದ್ದರು.