ಉಡುಪಿ, ಆ 17 (DaijioworldNews/HR): ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಸೆಂಟರ್ ಫಾರ್ ಇಂಟರ್ಕಲ್ಚರಲ್ ಸ್ಟಡೀಸ್ ಆ್ಯಂಡ್ ಡಯಲಾಗ್ [ಸಿಎಸ್ಐಡಿ] ಘಟಕವು ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು ಎಂಬ ಶೀರ್ಷಿಕೆಯಲ್ಲಿ ಆನ್ಲೈನ್ ಕೋರ್ಸ್ ಆರಂಭಿಸುತ್ತಿದ್ದು ಇದರ ಉದ್ಘಾಟನೆ ಆಗಸ್ಟ್ 18 ಗುರುವಾರ ಸಂಜೆ 4:30 ಗಂಟೆಗೆ ಮಣಿಪಾಲದ ಮಾಹೆ ಮುಖ್ಯ ಕಚೇರಿಯ ಅಂಗಣದಲ್ಲಿ ನಡೆಯಲಿದೆ.
ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ (ಎಂಇಎಂಜಿ) ಅಧ್ಯಕ್ಷರಾದ ಡಾ. ರಂಜನ್ ಪೈಯವರು ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿಗಳಾದ ಲೆ, ಜ.ಡಾ. ಎಂ. ಡಿ. ವೆಂಕಟೇಶ್, ಕುಲಸಚಿವರಾದ ಡಾ. ನಾರಾಯಣ ಸಭಾಹಿತ್ ಅವರ ಉಪಸ್ಥಿತಿಯಲ್ಲಿ ಈ ಆನ್ಲೈನ್ ಕೋರ್ಸ್ನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಉಡುಪಿ ಜನಪದ ಬದುಕಿನ ಸಂಭ್ರಮವನ್ನು ಪ್ರತಿನಿಧಿಸುವ ಕಲೆಯಾಗಿರುವ ‘ಹುಲಿವೇಷ ಕುಣಿತ’ವನ್ನು ಸುಪ್ರಸಿದ್ಧ ಅಶೋಕ್ ಕಾಡುಬೆಟ್ಟು ಬಳಗದವರು ಪ್ರಸ್ತುತಿಪಡಿಸಲಿದ್ದಾರೆ.
ಸ್ಥಳೀಯ ಸಂಸ್ಕೃತಿಯ ಮೂಲಕ ಸಮಗ್ರ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಈ ಅಭ್ಯಾಸಕ್ರಮದ ಆಶಯವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮಣಿಪಾಲವು ತುಳು ಪರಿಸರದಲ್ಲಿ ಇರುವ ನಗರವಾಗಿದೆ. ಮಣಿಪಾಲದ ಸುತ್ತಮುತ್ತಲಿನ ಜನಪದವನ್ನು ಅರ್ಥಮಾಡಿಕೊಳ್ಳುವ ಮೂಲಕ ಇಡೀ ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳುವ ಪ್ರಯತ್ನವಾಗಿ ಈ ಆನ್ಲೈನ್ ಕೋರ್ಸ್ ಮಹತ್ವ ಪಡೆಯುತ್ತದೆ, ಭಾರತೀಯತೆ ಎಂಬುದು ಸಂಸ್ಕೃತಿಯ ಸ್ಥೂಲ ರೂಪವಾದರೆ, ತುಳುಸಂಸ್ಕೃತಿಯನ್ನು ಒಳಗೊಂಡಿರುವ ಮಣಿಪಾಲದ ಪರಿಸರವು ಸಂಸ್ಕೃತಿಯ ಸೂಕ್ಷ್ಮ ರೂಪವಾಗಿದೆ, ಸಮಕಾಲೀನ ಸಂದರ್ಭದಲ್ಲಿ ತುಳು ಜನಪದರ ಜೀವನದ ಅವಿಭಾಜ್ಯ ಭಾಗಗಳಂತಿರುವ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಮತ್ತು ಕಂಬಳ ಪ್ರಕಾರಗಳನ್ನು ಈ ಆನ್ಲೈನ್ ಕೋರ್ಸ್ನ ಮೊದಲ ಹಂತದಲ್ಲಿ ಅಧ್ಯಯನಕ್ಕೆ ಪರಿಗಣಿಸಲಾಗಿದೆ.
ಇನ್ನು ಕಲೆಗಳ ಆರಾಧನಾತ್ಮಕ ಮತ್ತು ಮನೋರಂಜನಾತ್ಮಕ ಆಶಯಗಳ ನಡುವಿನ ಸಂಬಂಧಗಳನ್ನು ಶೈಕ್ಷಣಿಕ ನೆಲೆಯಲ್ಲಿ ವಿಶ್ಲೇಷಿಸುವ ಈ ಆನ್ಲೈನ್ ಕೋರ್ಸ್ನಲ್ಲಿ ಆಕರ್ಷಕವಾದ ವೀಡಿಯೋ ಸಾಕ್ಷ್ಯಚಿತ್ರಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಹಿರಿಯ ಕಲಾವಿದರ ಅನುಭವಗಳ ದಾಖಲೆಗಳಿವೆ, ವಿಷಯತಜ್ಞರ ಉಪನ್ಯಾಸಗಳ ಸಂಗ್ರಹವಿದೆ.
ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಕುಣಿತದ ಪ್ರದರ್ಶನ ಏರ್ಪಡುತ್ತದೆ. ಹುಲಿವೇಷ ಕುಣಿತ ಎಂಬುದು ಉಡುಪಿ-ಮಣಿಪಾಲ ಅವಳಿನಗರಗಳಲ್ಲಿ ಜೀವನೋತ್ಸಾಹವನ್ನು ಉದ್ದೀಪಿಸುವ ಕಲೆಯಾಗಿದೆ. ಹಾಗಾಗಿಯೇ, ಉಡುಪಿಗೆ ಸನಿಹ ಇರುವ ವಿಶ್ವಖ್ಯಾತಿಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಮಣಿಪಾಲದಲ್ಲಿ ಹುಲಿವೇಷ ಕುಣಿತವನ್ನು
ಆಯೋಜಿಸಲಾಗುತ್ತಿದೆ.