ಉಡುಪಿ, ಆ 17 (DaijiworldNews/DB): ಬಿಜೆಪಿಯವರು ನಮ್ಮ ಮನೆ ಮುಂದೆ ಸಾವರ್ಕರ್ ಭಾವಚಿತ್ರ ಅಲ್ಲ, ಕಟೌಟ್ ಬೇಕಾದರೂ ಹಾಕಲಿ. ಪುತ್ಥಳಿ ಬೇಕಾದರೂ ಹಾಕಲಿ. ನೋಡಲು ಜನರಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರ ಮನೆಮನೆಗೆ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸಾವರ್ಕರ್ ಫೋಟೋ ಹಾಕಲಿ ಬಿಡಿ, ನಮ್ಮದೇನು ಅಡ್ಡಿ ಇಲ್ಲ.ಅವರು ಸಾವರ್ಕರ್ರನ್ನು ನಂಬುವವರು. ಧೈರ್ಯಕ್ಕೆ ಸುಭಾಶ್ಚಂದ್ರ ಬೋಸ್ ಅವರನ್ನು ಸೇರಿಸಿಕೊಂಡಿದ್ದಾರೆ ಎಂದರು.
ನಾವು ಗಾಂಧೀಜಿ, ನೆಹರು, ನೇತಾಜಿ, ಭಗತ್ ಸಿಂಗ್ ಅವರನ್ನು ನಂಬುವವರು. ನನಗೆ ಸಾವರ್ಕರ್ ಬಗ್ಗೆ ಹೆಚ್ಚೇನು ತಿಳಿದಿಲ್ಲ. ಇತ್ತೀಚಿನ ದಿನದಲ್ಲಿ ಅವರ ಹೆಸರನ್ನು ಕೇಳುತ್ತಿದ್ದೇನೆ ಅಷ್ಟೇ. ಇಂದಿರಾ ಗಾಂಧಿಯವರು ಸಾವರ್ಕರ್ ಸ್ಟ್ಯಾಂಪ್ ರಿಲೀಸ್ ಮಾಡಿದ್ದು ನನಗೆ ಗೊತ್ತಿಲ್ಲ. ಬಿಜೆಪಿಯವರು ಸಾವರ್ಕರ್ ಕಟೌಟ್, ಪುತ್ತಳಿ ಬೇಕಾದರೂ ಹಾಕಲಿ ನೋಡಲು ಜನರಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಕಚೇರಿಗೆ ಬಿಜೆಪಿ ಯುವಮೋರ್ಚಾ ಮುತ್ತಿಗೆ ವಿಚಾರದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನಮ್ಮ ಕಚೇರಿಗೆ ಮುತ್ತಿಗೆ ಹಾಕಿಲ್ಲ. ಅಂಗಳಕ್ಕೆ ಬಂದು ಹೋಗಿದ್ದಾರೆ. ಪೊಲೀಸರು ಜೊತೆಗಿರುವಾಗ ಮುತ್ತಿಗೆ ಹಾಕುವುದಕ್ಕೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಬ್ಯಾನರ್ ಹಾಕಲು ಪರವಾನಿಗೆ ಪಡೆದಿದ್ದರೆ ಹಾಕಲಿ. ಗೋಡ್ಸೆ ಬೋರ್ಡ್ ಹಾಕಿದಾಗಲೂ ಜಿಲ್ಲಾ ಕಾಂಗ್ರೆಸ್ ನಾವು ಮಾತನಾಡಲಿಲ್ಲ. ಸಾವರ್ಕರ್ ಕಟೌಟ್ ತೆಗೆಯಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್ ಹಾಕಿದ್ದ ಬ್ಯಾನರನ್ನು ಬಿಜೆಪಿ ಪುಡಿಪುಡಿ ಮಾಡಿ ಬಿಸಾಕಿತ್ತು. ಅನುಮತಿಯಿಲ್ಲದೆ ಹೇಗೆ ಬ್ಯಾನರ್ ಹಾಕಿದ್ದೀರಿ ಎಂದು ಕೇಳಲು ನಮ್ಮ ಕಾರ್ಯಕರ್ತರು ಹೋಗಿದ್ದಾರೆ. ಯಾರದ್ದೇ ಕಟೌಟ್ ಹಾಕಿದರೂ ಕಾಂಗ್ರೆಸ್ ವಿರೋಧಿಸುವುದಿಲ್ಲ. ಬ್ಯಾನರ್ ಹಾಕುವುದು ಅವರವರ ಇಚ್ಛೆ. ನಾವು ಸಾವರ್ಕರ್ ಕಟೌಟ್ ಹಾಕಿಲ್ಲ, ಹಾಕುವುದೂ ಇಲ್ಲ ಎಂದು ತಿಳಿಸಿದರು.