ಬೈಂದೂರು,ಫೆ 01 (MSP): ತರಗತಿಯಲ್ಲಿ ವಿದ್ಯಾರ್ಥಿಗಳು ತಲ್ಲೀನರಾಗಿ ಪಾಠ ಕೇಳುತ್ತಿರುವಾಗ ಕ್ಲಾಸ್ ರೂಂಗೆ ಸದ್ದಿಲ್ಲದೇ ಕಾಳಿಂಗ ಸರ್ಪವೊಂದು ಎಂಟ್ರಿ ಕೊಟ್ಟು ಗೊಂದಲ ಸೃಷ್ಟಿಸಿದ ಘಟನೆ ಹೊಸಂಗಡಿಯಲ್ಲಿ ನಡೆದಿದೆ.
ಬೈಂದೂರು ತಾಲೂಕಿನಲ್ಲಿರುವ ಹೊಸಂಗಡಿಯ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಯೊಂದಕ್ಕೆ ಭಾರಿ ಗಾತ್ರದ ಕಾಳಿಂಗ ಸರ್ಪ ನುಸುಳತೊಡಗಿದೆ. ಇದರಿಂದ ಬೆಚ್ಚಿ ಬಿದ್ದ ಪುಟ್ಟ ಮಕ್ಕಳು ಗಾಬರಿಯಿಂದ ಕಿರುಚತೊಡಗಿದ್ದಾರೆ. ಮಾತ್ರವಲ್ಲದೇ ದೊಡ್ಡ ಗಾತ್ರದ ಕಾಳಿಂಗ ಸರ್ಪವನ್ನ ಕಂಡು ತರಗತಿಯಲ್ಲಿದ್ದ ವಿಧ್ಯಾರ್ಥಿಗಳು ಜೀವಭಯದಿಂದ ಹೊರಗೋಡಿ ಬಂದಿದ್ದಾರೆ.
ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಕಾರಣ ಬೃಹತ್ ಗಾತ್ರದ ಕಾಳಿಂಗ ಸರ್ಪ ತರಗತಿಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಬಳಿಕ ಸ್ಥಳೀಯ ಉರಗ ತಜ್ಞರನ್ನು ಕರೆಸಿ ಕಾಳಿಂಗ ಸರ್ಪವನ್ನು ಹರಸಾಹಸ ಪಟ್ಟು ಸೆರೆಹಿಡಿಯಲಾಯಿತು. ನಂತರ ಕಾಳಿಂಗ ಮತ್ತೆ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.