ಉಡುಪಿ, ಆ 16 (DaijiworldNews/SM): ನಗರದ ಬ್ರಹ್ಮಗಿರಿ ಸರ್ಕಲ್ ಬಳಿ ಜೈ ಹಿಂದೂ ರಾಷ್ಟ್ರ ಎಂಬ ತಲೆ ಬರಹದಡಿಯಲ್ಲಿ ಅಳವಡಿಸಿರುವ ಸಾವರ್ಕರ್ ಭಾವಚಿತ್ರವಿರುವ ಬ್ಯಾನರ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ "ಸಮಾಜದ ಶಾಂತಿ ಕದಡಲು ಈ ಬ್ಯಾನರ್ ಪರೋಕ್ಷವಾಗಿ ಕಾರಣವಾಗುತ್ತಿದ್ದು ಕೂಡಲೇ ಅದನ್ನು ತೆರವುಗೊಳಿಸಬೇಕು. ಮಂಗಳೂರಿನಲ್ಲಿ ಕೂಡಾ ಇಂತಹ ಫ್ಲೆಕ್ಸ್ ಕಂಡುಬಂದಾಗ ಅಲ್ಲಿನ ಮಹಾನಗರ ಪಾಲಿಕೆ ತಕ್ಷಣವೇ ಅದನ್ನು ತೆರವುಗೊಳಿಸಿದೆ ಅದೇ ರೀತಿ ಉಡುಪಿಯಲ್ಲೂ ಇದನ್ನು ತೆರವುಗೊಳಿಸಬೇಕು. ಇದಕ್ಕೆ ಪರ್ಮಿಷನ್ ನೀಡಿದ್ದಾರೆ ಎನ್ನುತ್ತಾರೆ ಆದರೆ ಅದರ ನಂಬರ್ ಕೂಡಾ ಹಾಕಿಲ್ಲ. ಈ ಬ್ಯಾನರ್ ಕಾಯಲು ಒಂದಷ್ಟು ಪೋಲಿಸರನ್ನು ಕೂಡಾ ನಿಯೋಜಿಸಲಾಗಿದೆ. ಇದನ್ನು ತಕ್ಷಣವೇ ತೆರವು ಮಾಡದೇ ಇದ್ದಲ್ಲಿ ಉಗ್ರವಾದ ಹೋರಾಟವನ್ನು ನಾವು ಮಾಡತ್ತೇವೆ" ಎಂದು ಎಚ್ಚರಿಸಿದರು.
ಈ ಮೊದಲು ನಗರ ಠಾಣೆಯ ಪೊಲೀಸ್ ಅಧಿಕಾರಿ ಪ್ರಮೋದ್ ಅವರನ್ನು ಭೇಟಿ ಮಾಡಿ ಬ್ಯಾನರ್ ತೆರವುಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮ್ಮದ್ ಉಡುಪಿ, ಕಾಂಗ್ರೆಸ್ ನಾಯಕರಾದ ಯತೀಶ್ ಕರ್ಕೇರಾ, ಶರತ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.