ಕುಂದಾಪುರ, ಆ 16 (DaijiworldNews/DB): ಕೊಂಕಣ ರೈಲ್ವೆ ಆರಂಭವಾದ ದಿನದಿಂದಲೂ ಕುಂದಾಪುರ ರೈಲು ನಿಲ್ದಾಣದಲ್ಲಿ ಸೇವೆ ನಿಡುತ್ತಿದ್ದ ತಿರುವನಂತಪುರಂ ಮುಂಬಯಿ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿಗೆ ಕೋವಿಡ್ ಸಮಯದಲ್ಲಿ ತೆಗದು ಹಾಕಲಾದ ನಿಲುಗಡೆ ಇನ್ನೂ ಆರಂಭವಾಗದೇ ಇರುವುದು ಪ್ರಯಾಣಿಕರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
ಕುಂದಾಪುರ ಭಾಗದಿಂದ ನಿರ್ದಿಷ್ಟವಾಗಿ ರಾತ್ರಿ ಕಾಲ ಮುಂಬೈಗೆ ಸಂಚರಿಸುವ ನೇತ್ರಾವತಿ ರೈಲನ್ನು ಬಳಸುವ ದೊಡ್ಡ ಸಮುದಾಯವಿದೆ. ನೂರಾರು ಪ್ರವಾಸಿಗಳೂ ನೇತ್ರಾವತಿ ರೈಲಿನಲ್ಲಿ ಕುಂದಾಪುರ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದರು. ಅದೇ ರೀತಿ ಗೋವಾ ಭಾಗದಿಂದ ಬರುವ ಪ್ರಯಾಣಿಕರಿಗೆ ಪ್ಯಾಸೆಂಜರ್ ರೈಲು ಹೊರಟ ನಂತರ ಮರುದಿನ ಬೆಳಗ್ಗೆವರೆಗೆ ಬೇರಾವ ರೈಲೂ ಇಲ್ಲದೆ ಸಮಸ್ಯೆ ಸೃಷ್ಟಿಯಾಗಿದ್ದು, ಶೀಘ್ರ ನೇತ್ರಾವತಿ ರೈಲಿನ ನಿಲುಗಡೆ ಮರು ಆರಂಭಕ್ಕೆ ಕೊಂಕಣ ರೈಲ್ವೆ ನಿಗಮಕ್ಕೆ ಆಗ್ರಹ ಮಾಡಲಾಗುತ್ತಿದೆ.
ಕುಂದಾಪುರ ನಿಲ್ದಾಣದಲ್ಲಿ ನಿಲುಗಡೆ ನೀಡುತ್ತಿದ್ದ ರೈಲು ನಿಲುಗಡೆಗೆ ಕೂಡಲೇ ಕ್ರಮ ಕೈಗೊಳ್ಖುವಂತೆ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಮಾಡಿದ್ದಾರೆ.
ಪದೇಪದೇ ಕುಂದಾಪುರ ನಿಲ್ದಾಣಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನ ಸಾಮಾನ್ಯರು ತೀವ್ರ ಬೇಸರ ವ್ಯಕ್ತಪಡಿಸುತಿದ್ದು, ಯಾವ ಮಾನದಂಡದಲ್ಲಿ ಕುಂದಾಪುರದ ನೇತ್ರಾವತಿ ನಿಲುಗಡೆಯನ್ನು ರದ್ದು ಮಾಡಲಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.
ನೇತ್ರಾವತಿ ಎಕ್ಸ್ಪ್ರೆಸ್ ರೈಲು ಕೋವಿಡ್ ಕಾರಣದಿಂದ ರದ್ದಾಗಿದ್ದರೆ ಕೂಡಲೇ ಅದನ್ನು ಮರು ಆರಂಭಿಸುವಂತೆ ಕೊಂಕಣ ರೈಲ್ವೆಗೆ ಮನವಿ ಮಾಡಲಾಗಿದೆ. ನೇತ್ರಾವತಿ ರೈಲು ಕುಂದಾಪುರದ ಅತೀ ಪ್ರಮುಖ ನಿಲುಗಡೆಯ ರೈಲಾಗಿದ್ದು , ನೂರಾರು ಜನರಿಗೆ ರಾತ್ರಿ ಪ್ರಯಾಣಕ್ಕೆ ಉಪಯೋಗಿಯಾಗಿತ್ತು ಎಂದು ರೈಲು ಹಿತರಕ್ಷಣಾ ಸಮಿತಿಯ ಗಣೇಶ್ ಪುತ್ರನ್ ತಿಳಿಸಿದ್ದಾರೆ.