ಮಂಗಳೂರು, ಆ 16 (DaijiworldNews/DB): ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯಲ್ಲಿ ದೇಶಾದ್ಯಂತ ಆಯ್ಕೆ ಮಾಡಲಾಗಿದ್ದ 75 ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಟಾಪ್-12ನೇ ಸ್ಥಾನ ಗಳಿಸಿದೆ.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅಸಂಘಟಿತ ವಲಯದ ಕಾರ್ಮಿಕರನ್ನು ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯಡಿ ನೋಂದಾಯಿಸಲು ಕೇಂದ್ರ ಸರ್ಕಾರ ದೇಶದ 75 ಜಿಲ್ಲೆಗಳನ್ನು ಆಯ್ಕೆ ಮಾಡಿ ಇದೇ ಆ.15ರ ಸೋಮವಾರ ಅಂತಿಮ ಗಡುವು ನೀಡಿತ್ತು. 75 ಜಿಲ್ಲೆಗಳ ಪೈಕಿ 12 ಜಿಲ್ಲೆಗಳು ಶೇ. 100 ಗುರಿ ಸಾಧಿಸಿವೆ.
ಈ ಯೋಜನೆಯಡಿ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕೈಗೊಂಡ ಕ್ರಮಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯೂ ಸಹ ಶೇ. 100 ಗುರಿ ಸಾಧಿಸಿದೆ ಎಂದು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.