ಕಾಸರಗೋಡು, ಆ 16 (daijiworldNews/HR): ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2024 ರ ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇರಳ ಲೋಕೋಪಯೋಗಿ ಸಚಿವ ಪಿ.ಎ ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ.
ಮಂಗಳವಾರ ತಲಪಾಡಿ - ಚೆಂಗಳ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಕುಂಬಳೆಯ ಮೇಲ್ಸೇತುವೆ 2022 ಡಿಸಂಬರ್ ಹಾಗೂ ಕಾಸರಗೋಡು ಮೇಲ್ಸೇತುವೆಯನ್ನು 2024 ರ ಮೇ 15 ರೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಕಾಸರಗೋಡಿನ ಜನತೆಯ ದಶಕಗಳ ಕನಸಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಧಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು . ರಾಜ್ಯದ 9 ಜಿಲ್ಲೆಗಳಲ್ಲಿ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಲ ಜಿಲ್ಲೆಗಳಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ . ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ . ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ಇನ್ನು ಕೆಲ ಸ್ಥಳಗಲ್ಲಿ ಲೋಪಗಳ ಬಗ್ಗೆ ಪರಿಸರವಾಸಿಗಳು ಹಾಗೂ ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದು, ಈ ಬಗ್ಗೆ ಗಮನ ನೀಡಲಾಗುವುದು. ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸುವ ಗುರಿ ಯೊಂದಿಗೆ ಸಂಸದರು, ಶಾಸಕರು, ರಾಜಕೀಯ ಪಕ್ಷಗಳ ಸಹಕಾರವನ್ನು ಪಡೆದು ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಶಾಸಕ ಎನ್. ಎ ನೆಲ್ಲಿಕುನ್ನು, ಎ.ಕೆಎಂ ಅಶ್ರಫ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗೀಯ ಅಧಿಕಾರಿ ಬಿ.ಎಲ್ ಮೀನಾ, ಯೋಜನಾ ನಿರ್ದೇಶಕ ಸುನಿಲ್ ಕುಮಾರ್, ಎಂ. ವಿ ಬಾಲಕೃಷ್ಣನ್ ಮೊದಲಾದವರು ಸಚಿವರ ಜೊತೆಗಿದ್ದರು.