ಉಳ್ಳಾಲ, ಆ 15 (DaijiworldNews/HR): ತೊಕ್ಕೊಟ್ಟುವಿನಲ್ಲಿ ಎತ್ತರದ ರಾಷ್ಟ್ರಧ್ವಜ ಹಾರಾಡುವ ಮೂಲಕ ಉಳ್ಳಾಲ ತಾಲೂಕಿನ ಈ ಬಾರಿಯ ಸ್ವಾತಂತ್ರ್ಯೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಉಳ್ಳಾಲದ ಜನರ ಸ್ವಾಭಿಮಾನದ ಸಂಕೇತವಾಗಿ ಪ್ರೀತಿ, ವಿಶ್ವಾಸ, ಸಹೋದರತೆ, ಏಕತೆಯ ಸಂಕೇತವನ್ನು ರಾಷ್ಟ್ರಧ್ವಜ ಸಾಕ್ಷಿಯಾಗಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಉಳ್ಳಾಲ ನಗರಸಭೆ ವ್ಯಾಪ್ತಿಯ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸುಮಾರು 110 ಅಡಿ ಎತ್ತರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬೃಹತ್ ರಾಷ್ಟ್ರಧ್ವಜದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ತೊಕ್ಕೊಟ್ಟುವಿನಲ್ಲಿ ಹಾಕಿದ ರಾಷ್ಟ್ರಧ್ವಜ ಶಾಶ್ವತವಾಗಿ ನೆಲೆನಿಂತು ಮುಂದಿನ ಪೀಳಿಗೆಗೆ ಉತ್ತಮವಾದ ಸಂದೇಶವನ್ನು ನೀಡಲಿ. 100ನೇ ಸ್ವಾತಂತ್ರ್ಯ ದಿನಕ್ಕೆ ಇಂದಿನ ನಾಯಕರು ಇರಲು ಅಸಾಧ್ಯ. ಈಗಿರುವ ಮಕ್ಕಳೇ ಮುಂದಿನ 100ನೇ ಸ್ವಾತಂತ್ರ್ಯ ದಿನವನ್ನು ಇಲ್ಲೇ ಇನ್ನಷ್ಟು ವಿಜೃಂಭಣೆಯಿಂದ ಓಗ್ಗಟ್ಟಿನಿಂದ ಆಚರಿಸುವ ಸಂಪೂರ್ಣ ವಿಶ್ವಾಸವಿದೆ. ಕ್ಷೇತ್ರಕ್ಕೆ 24 ಗಂಟೆಗಳ ಶಾಶ್ವತ ಕುಡಿಯುವ ನೀರಿನ ಯೋಜನೆ, ಶೈಕ್ಷಣಿಕ ಅಭಿವೃದ್ಧಿ, ಸುಸಜ್ಜಿತ ರಸ್ತೆಗಳ ಅಭಿವೃದ್ಧಿಗೆ ಎಲ್ಲಾ ಸರಕಾರಗಳು ಸಹಕಾರವನ್ನು ನೀಡಿದೆ. ಎಲ್ಲರೂ ದ್ವೇಷ ಎಂಬ ಪದವನ್ನು ಹೃದಯದಿಂದ ಕಿತ್ತುಬಿಸಾಡುವ ಕೆಲಸವಾಗಲಿ. ಸಮಾಜಕ್ಕೆ ಪೂರಕವಾಗುವ ಕಾರ್ಯ, ಮಾತುಗನ್ನಾಡುವುದೇ ನಿಜವಾದ ದೇಶಪ್ರೇಮ. ಇಂದಿನ ಕಾರ್ಯಕ್ರಮಕ್ಕೆ ಎಲ್ಲಾ ಜಾತಿ ಧರ್ಮದವರು, ಧಾರ್ಮಿಕ ಮುಖಂಡರು, ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಭಾಗವಹಿಸಿ ನೀಡಿರುವ ಸಹಕಾರಕ್ಕೆ ಧನ್ಯವಾದಗಳು ಎಂದರು.
ಈ ಸಂದರ್ಭ ಉಳ್ಳಾಲ ತಾಲೂಕು ವ್ಯಾಪ್ತಿಯ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಧ್ವಜಾರೋಹಣ ನಡೆಯುವ ಸ್ಥಳದತ್ತ ಪಥಸಂಚಲನ ನಡೆಯಿತು.
ಈ ವೇಳೆ ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ,ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಪ್ರೈ.ಲಿ ಮಾಜಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಉಳ್ಳಾಲ ತಾಲೂಕು ತಹಶೀಲ್ದಾರ್ ಗುರುಪ್ರಸಾದ್, ಜಿ.ಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಶೈಲಾ ಜಿ. ಕಾರೆ, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ವಿದ್ಯಾ ಕಾಳೆ, ಸೋಮೇಶ್ವರ ಪುರಸಭೆ ಪೌರಾಯುಕ್ತ ಮತಡಿ, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮೊದಲಾದವರು ಉಪಸ್ಥಿತರಿದ್ದರು.
ಪಥಸಂಚಲನದಲ್ಲಿ ಪ್ರಥಮ ಪ್ರಶಸ್ತಿಯನ್ನು ಉಳ್ಳಾಲದ ಹಝ್ರತ್ ಸೈಯ್ಯದ್ ಮದನಿ ಪ್ರೌಢಶಾಲೆ , ದ್ವಿತೀಯ ಸರಕಾರಿ ಪ್ರೌಢಶಾಲೆ ಬಬ್ಬುಕಟ್ಟೆ ಹಾಗೂ ತೃತೀಯ ಸ್ಥಾನವನ್ನು ಹಳೇಕೋಟೆ ಉಳ್ಳಾಲದ ಸೈಯ್ಯದ್ ಮದನಿ ಶಾಲೆ ಪಡೆದುಕೊಂಡಿತು.
ಕಾಲೇಜು ವಿಭಾಗದಲ್ಲಿ ಮದನಿ ಪಿಯು ಕಾಲೇಜು ಪ್ರಥಮ, ಭಾರತ್ ಪಿಯು ಕಾಲೇಜು ಧ್ವಿತೀಯ ಹಾಗೂ ಕೋಟೆಪುರ ಟಿಪ್ಪು ಸುಲ್ತಾನ್ ಕಾಲೇಜು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸರ್ವಾಂಗೀಣ ಪ್ರದರ್ಶನ ಪ್ರದರ್ಶಿಸಿದ ಬಬ್ಬುಕಟ್ಟೆ ನಿತ್ಯಾಧರ್ ಆಂಗ್ಲಮಾಧ್ಯಮ ಶಾಲೆ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿತು. ಹೈಸ್ಕೂಲ್ ವಿಭಾಗದಲ್ಲಿ 11 ಶಾಲೆಗಳು, ಪಿಯು ವಿಭಾಗದಲ್ಲಿ ಆರು ಕಾಲೇಜುಗಳ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.