ಮಂಗಳೂರು, ಫೆ 01 (MSP): ಪಶ್ಚಿಮ ಸಮುದ್ರ ತೀರದ ಚಟುವಟಿಕೆಗಳ ಮೇಲಿನ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಕುಂದಾಪುರ ಮತ್ತು ಬೇಲೆಕೇರಿಯಲ್ಲಿ ಎರಡು ರಾಡಾರ್ಗಳನ್ನು ಅಳವಡಿಸಲಾಗುವುದು ಎಂದು ಕರಾವಳಿ ರಕ್ಷಣಾ ಪಡೆಯ ಡಿಐಜಿ ಹಾಗೂ ಕಮಾಂಡರ್ ಎಸ್.ಎಸ್. ದಸೀಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೇಲೆಕೇರಿಯಲ್ಲಿ ಈಗಾಗಲೇ ರಾಡಾರ್ ಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಕುಂದಾಪುರದ ಲೈಟ್ಹೌಸ್ನಲ್ಲಿ ರಾಡಾರ್ ಕೇಂದ್ರ ನಿರ್ಮಾಣ ಆಗಲಿದ್ದು ಈ ಪ್ರಕ್ರಿಯೂ ಪ್ರಗತಿಯಲ್ಲಿದೆ ಎಂದರು.. ಭಟ್ಕಳ ಹಾಗೂ ಸುರತ್ಕಲ್ಗಳಲ್ಲಿ ಈಗಾಗಲೇ ರಾಡಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳು 60ರಿಂದ 80 ನಾಟಿಕಲ್ ಮೈಲು ವರೆಗಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಬಲ್ಲವು. ಸುರತ್ಕಲ್ನ ರಾಡಾರ್ ಕೇಂದ್ರದಲ್ಲಿ ಕುಳಿತು ಭಟ್ಕಳದವರೆಗೆ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಿದೆ. ರಾಡಾರ್ಗಳು ಗುಣಮಟ್ಟದ ಕೆಮರಾ ಗಳನ್ನು ಹೊಂದಿವೆ ಎಂದರು.
ಕರಾವಳಿ ರಕ್ಷಣಾ ಪಡೆಯ ನೌಕೆಗಳು ಮತ್ತು ವಿಮಾನಗಳು ಕರ್ನಾಟಕದ ಕಡಲ ತೀರವನ್ನು ಸುರಕ್ಷಿತವಾಗಿಸಿವೆ. ಸಮುದ್ರದಲ್ಲಿ ಅಕ್ರಮ ಚಟು ವಟಿಕೆಗಳ ಮೇಲೆ ನಿಗಾ ಇರಿಸುವ ಜತೆಗೆ ಸಂಕಷ್ಟ, ಅಪಾಯದಲ್ಲಿರುವ ಮೀನುಗಾರರಿಗೆ ತತ್ಕ್ಷಣದ ಮಾನವೀಯ ನೆರವನ್ನು ಕೂಡ ಕಾವಲು ಪಡೆಯ ನೌಕೆಗಳ ಮೂಲಕ ನೀಡಲಾಗುತ್ತಿದೆ ಎಂದರು.