ಮಂಗಳೂರು, ಆ 15 (DaijiworldNews/MS): ಪರಿಶಿಷ್ಟ ಜಾತಿಯ ಬಾಲಕಿಯನ್ನು ಅತ್ಯಾಚಾರಗೈದ ಆರೋಪವು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೋ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಆರೋಪಿ ಮಂಗಳೂರಿನ ಸುಧಾಕರ ಪೂಜಾರಿಗೆ ನ್ಯಾಯಧೀಶರು 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಕರಣದ ವಿವರ:
2014ರ ಡಿ.6ರಂದು ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡುವ ದುರುದ್ದೇಶದಿಂದ ಆಕೆಯನ್ನು ಮಂಗಳೂರಿನಿಂದ ಮೈಸೂರಿಗೆ ಅಪಹರಿಸಿಕೊಂಡು ಹೋಗಿದ್ದ ಎನ್ನಲಾಗಿದೆ. ಮೈಸೂರಿನ ಪಾಂಡವಪುರ ಬಸವನಗುಡಿ ದೇವಸ್ಥಾನದಲ್ಲಿ ಕರಿಮಣಿ ಸರ ಕಟ್ಟಿ ಬಳಿಕ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇವಿನಕೊಪ್ಪ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ.
ಈ ಸಂದರ್ಭ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ ಆರೋಪದಡಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಧಾಕರ ಪೂಜಾರಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಆರ್.ಕಲ್ಯಾಣ್ ಶೆಟ್ಟಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ತೀರ್ಪು ಪ್ರಕಟಿಸಿದ್ದಾರೆ. ಸುಧಾಕರ ಪೂಜಾರಿಗೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ 7 ವರ್ಷ ಮತ್ತು ಅಪಹರಣ ಆರೋಪಕ್ಕೆ ಸಂಬಂಧಿಸಿ ಐದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ, ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು