ಮಂಗಳೂರು, ಆ 15 (DaijiworldNews/MS): 90ರ ದಶಕದಲ್ಲಿ ಕರಾವಳಿಯನ್ನು ಬೆಚ್ಚಿಬೀಳಿಸಿದ್ದ, ಚಿನ್ನಕ್ಕಾಗಿ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿದ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಜೈಲು ವಾಸದಲ್ಲಿದ್ದ ಪ್ರವೀಣ್ ಕುಮಾರ್ ಎಂಬಾತ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿ ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ಬಿಡುಗಡೆಯಾಗುವ ಕೈದಿಗಳಲ್ಲಿ ಪ್ರವೀಣ್ ಕುಮಾರ್ ಹೆಸರು ಕೂಡಾ ಸೇರ್ಪಡೆಯಾಗಿತ್ತು. ಈತನ ಬಿಡುಗಡೆಗೆ ಮುನ್ನ ಪ್ರವೀಣ್ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆ ದ.ಕ.ಜಿಲ್ಲಾ ಪೊಲೀಸರಿಂದ ವರದಿ ಕೇಳಿತ್ತು. ಈ ಹಿನ್ನಲೆಯಲ್ಲಿ ಪ್ರವೀಣ್ ಕುಟುಂಬಸ್ಥರ ಹೇಳಿಕೆ ಪಡೆದುಕೊಳ್ಳಲಾಗಿತ್ತು.
"ಯಾವ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ನಾನು ಹೊರಗೆ ಬಂದ್ರೆ ಇನ್ನೂ ನಾಲ್ಕು ಜನರನ್ನು ಕೊಲೆ ಮಾಡ್ತೇನೆ ಎಂದು ಈಗಾಗಲೇ ಹೇಳಿದ್ದರಿಂದ ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದೆಂದು ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ " ಎಂದು ಅಪರಾಧಿ ಪ್ರವೀಣ್ ಕುಮಾರ್ ಪತ್ನಿ, ಸಹೋದರ ಮತ್ತು ಕೊಲೆಯಾದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಸಹಿತ ಕುಟುಂಬಸ್ಥರು, ವ್ಯಕ್ತಪಡಿಸಿ ಜನಪ್ರತಿನಿಧಿಗಳು, ವಿವಿಧ ಸ್ತರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಪ್ರವೀಣ್ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಇದೆ.
"ಕುಟುಂಬಸ್ಥರ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರವೀಣ್ನನ್ನು ಜೈಲಿನಿಂದ ಬಿಡುಗಡೆ ಬೇಡ ಎಂಬುದಾಗಿ ಇಲಾಖೆಗೆ ವರದಿ ನೀಡಿದ್ದೇವೆ. ಹಾಗಾಗಿ ಬಿಡುಗಡೆ ಸಾಧ್ಯತೆ ಕಡಿಮೆ" ಎಂದು ದ.ಕ. ಜಿಲ್ಲಾ ಎಸ್ಪಿ ಹೃಷಿಕೇಶ್ ಸೋನಾವಣೆ ಪ್ರತಿಕ್ರಿಯಿಸಿದ್ದಾರೆ.