ಮಂಗಳೂರು, ಆ 14 (DaijioworldNews/SM): ಮಂಗಳೂರು ಏರ್ ಪೋರ್ಟ್ ನಲ್ಲಿ ಯುವಕ-ಯುವತಿ ಚಾಟಿಂಗ್ ಅವಾಂತರವೊಂದು ಭಾರೀ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ರನ್ ವೇನಲ್ಲಿ ಪ್ರಯಾಣಿಕರನ್ನು ಒಳಗೊಂಡಿದ್ದ ವಿಮಾನ ಹಾರಾಟ ಸ್ಥಗಿತಗೊಳಿಸಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ.
ಮಂಗಳೂರು ಏರ್ ಪೋರ್ಟ್(Mangaluru Airport) ನಲ್ಲಿ ವಾಟ್ಸಪ್ ಚಾಟ್(Whatsapp Chat) ಆತಂಕಕ್ಕೆ ಕಾರಣವಾಗಿದ್ದು ಭದ್ರತೆ ವಿಚಾರಕ್ಕೆ ಸಂಬಂಧಿಸಿ ಚಾಟ್ ಮಾಡಿದ್ದ ಯುವಕ-ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಪ್ ಚಾಟ್ ಮಾಡಿದ್ದರು ಎನ್ನಲಾಗಿದೆ.
ಮಂಗಳೂರು ಏರ್ ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಯುವತಿಯೊಬ್ಬಳು ಬಂದಿದ್ದು, ಮಂಗಳೂರು ಏರ್ ಪೋರ್ಟ್ ನಿಂದ ಮುಂಬೈಗೆ ತೆರಳಲು ಮತ್ತೊಬ್ಬ ಯುವಕ ಆಗಮಿಸಿದ್ದ. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಬೇರೆ ಬೇರೆ ವಿಮಾನದಲ್ಲಿ ಪ್ರಯಾಣಕ್ಕೆ ಸಿದ್ದತೆ ನಡೆಸಿದ್ದರು. ಯುವಕ ಮುಂಬೈ ವಿಮಾನದಲ್ಲಿ ಕೂತಿದ್ದು, ರನ್ ವೇಗೆ ಆಗಮಿಸಲು ವಿಮಾನ ಸಿದ್ದವಾಗಿತ್ತು. ಈ ವೇಳೆ ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನಲ್ಲಿ ಕೂತಿದ್ದ ಯುವತಿ ಜೊತೆ ಯುವಕ ಚಾಟಿಂಗ್ ನಲ್ಲಿ ನಿರತವಾಗಿದ್ದ.
ಚಾಟಿಂಗ್ ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯುವತಿಯ ಚಾಟಿಂಗ್ ಗಮನಿಸಿ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಮುಂಬೈ ವಿಮಾನ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಲಾಗಿದೆ. ಸದ್ಯ ಯುವಕ ಮತ್ತು ಯುವತಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಮಾಡಿದ್ದಾಗಿ ಜೋಡಿ ಹೇಳಿಕೆ ನೀಡಿದ್ದಾರೆ.