Karavali
ಉಡುಪಿ: ಕೃಷ್ಣನಗರಿಯಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಮರಣೆಗಳು
- Sun, Aug 14 2022 06:39:24 PM
-
ಉಡುಪಿ, ಆ 14 (DaijioworldNews/HR): ನಾವಿಂದು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಅಂದು ಭಾರತೀಯರಲ್ಲಿ ಹುಟ್ಟಿದ್ದ ದೇಶಪ್ರೇಮದ ಕಿಚ್ಚು ಇಡೀ ದೇಶದಾದ್ಯಂತ ಹಬ್ಬಿತ್ತು. ಪ್ರತಿಯೊಂದು ಪ್ರದೇಶದ ಜನರೂ ಒಂದಲ್ಲಾ ಒಂದು ರೀತಿಯಲ್ಲಿ ಭಾರತ ಮಾತೆಯ ಬಿಡುಗಡೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಆಗಸ್ಟ್ 14 ರ ಮಧ್ಯರಾತ್ರಿಯಂದು ಆಕಾಶವಾಣಿಯಲ್ಲಿ ಬಿತ್ತರಗೊಂಡಿದ್ದ ಆ ವಾರ್ತೆಯು ಪ್ರತೀ ಹಳ್ಳಿ ಹಳ್ಳಿಯ ಜನರನ್ನು ಸಂಭ್ರಮಗೊಳಿಸಿತ್ತು. ದೇಶದಲ್ಲಿ ಎದ್ದಿದ್ದ ಸ್ವಾತಂತ್ರ್ಯ ಚಳುವಳಿಯ ಕಿಡಿಯೊಂದು ಉಡುಪಿಯಲ್ಲೂ ಹರಡಿತ್ತು.
ಉಡುಪಿಯಲ್ಲಿ ಮೊತ್ತ ಮೊದಲಬಾರಿಗೆ ಸ್ವಾತಂತ್ರ್ಯ ಚಳುವಳಿಯು ಒಂದು ಜನಾಂದೋಲನವಾಗಿ ರೂಪುಗೊಂಡದ್ದು 1919 ರಲ್ಲಿ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಏಪ್ರಿಲ್ 13,1919 ರಂದು ಆದ ಸುದ್ದಿಯು ಉಡುಪಿಯ ಪ್ರಜ್ಞಾವಂತ, ಶಾಂತಿಪ್ರಿಯ ಜನತೆಯನ್ನು ಆಕ್ರೋಶಗೊಳ್ಳುವಂತೆ ಮಾಡಿತ್ತು. ಬ್ರಿಟಿಷರು ಭಾರತಕ್ಕೆ ಒಳಿತನ್ನು ಮಾಡುವುದಕ್ಕಿಂತ ಭಾರತದ ಅಸ್ಮಿತೆಯನ್ನು, ಭಾರತೀಯರನ್ನು ಮತ್ತು ಭಾರತದ ಸರ್ವಸಂಪತ್ತುಗಳನ್ನು ನಾಶ ಮಾಡುತ್ತಾರೆ ಎಂಬ ವಿಚಾರವು ಮನದಟ್ಟಾಯಿತು. ಈ ಹಿನ್ನೆಲೆಯಲ್ಲಿ ಬ್ರಿಟಿಷರ ವಿರುಧ್ಧ ಏಪ್ರಿಲ್ 15 ರಿಂದ ಒಂದು ವಾರದ ಕಾಲ ಉಡುಪಿಯಲ್ಲಿ ನಾನಾ ರೀತಿಯ ಶೋಕಸಭೆಗಳು, ಹರತಾಳಗಳು, ಪ್ರತಿಭಟನೆಗಳು ನಡೆದವು. ಇದರೊಂದಿಗೆ ಸ್ವಾತಂತ್ರ್ಯ ಚಳುವಳಿಯು ಉಡುಪಿಯಲ್ಲಿಯೂ ಸಕ್ರಿಯಗೊಂಡಿತು. ಆ ಕಾಲದಲ್ಲಿಯೇ ಚಳುವಳಿಗೆ ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ರಾಯ್ ,ದಿವಂಗತ ಗೋಪಾಲ ಕೃಷ್ಣ ಗೋಖಲೆ ಮುಂತಾದವರ ಆದರ್ಶಗಳು ಹಾಗೂ ಗಾಂಧೀಜಿಯ ನೇತೃತ್ವ ಪ್ರೇರಣೆಯನ್ನು ನೀಡಿತು.
ಅಂದಿನ ಕಾಲದ ಸ್ವಾತಂತ್ರ್ಯ ಹೋರಾಟದ ಚಳುವಳಿಗಳು ನಡೆಯುತ್ತಿದ್ದದ್ದು ಉಡುಪಿಯ ಅಜ್ಜರಕಾಡಿನಲ್ಲಿ. ಅಜ್ಜರಕಾಡಿನ ಬಂಡೆಗಳ ಮೇಲೆ ಒಂದಷ್ಟು ಉತ್ಸಾಹಿ ಹಿರಿಯರು ಹಾಗೂ ಕಿರಿಯರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸೇರುತ್ತಿದ್ದರು ಹಾಗೂ ರಾಷ್ಟ್ರದ ಬಗ್ಗೆ ಚಿಂತನೆಯನ್ನು ನಡೆಸುತ್ತಿದ್ದರು. ಆ ಕಾಲದಲ್ಲಿ ಉಡುಪಿಯ ಪ್ರಮುಖ ಶಾಲೆಗಳಾದ ಕ್ರಿಶ್ಚಿಯನ್ ಹೈಸ್ಕೂಲ್, ಬೋರ್ಡ್ ಹೈಸ್ಕೂಲ್ ಗಳಲ್ಲಿ ವಿಧ್ಯಾರ್ಥಿ ದೇಶಪ್ರೇಮಿ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದವು. ಅಲ್ಲಿ ಅವರು ದೇಶದ ಆಗುಹೋಗುಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಾ ಚಳುವಳಿಯನ್ನು ಹೇಗೆ ಮಾಡಬಹುದು ಮತ್ತು ಜನರಲ್ಲಿ ಹೇಗೆ ಜಾಗೃತಿಯನ್ನು ಮೂಡಿಸಬಹುದು ಎನ್ನುವುದನ್ನು ಅಭ್ಯಸಿಸುತ್ತಿದ್ದರು. ಅದೇ ರೀತಿ ಉಡುಪಿಯ ಸಂಸ್ಕೃತ ಮಹಾಪಾಠಶಾಲೆ, ಅನಂತೇಶ್ವರ ಶಾಲೆ ಮುಂತಾದ ಶಾಲೆಗಳಲ್ಲೂ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವ ಕೆಲಸವು ನಡೆಯುತ್ತಿತ್ತು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ನೊಂದುಹೋಗಿದ್ದ ಭಾರತೀಯರು ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸಲು ಹೊಸದಾಗಿ ಒಂದು ಚಳುವಳಿಯನ್ನು ನಡೆಸಲು ಧೃಡವಾದ ಸಂಕಲ್ಪವನ್ನು ಮಾಡಿದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಬ್ರಿಟಿಷ್ ಸರಕಾರ ಯಾವ ಮಟ್ಟಕ್ಕೂ ಇಳಿದು ಅನಾಚಾರಗಳನ್ನು ಮಾಡಬಲ್ಲದು ಎಂದು ಅರಿತಿದ್ದ ಗಾಂಧೀಜಿಯ ಮನಸ್ಸಿನಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯ ಯೋಜನೆಯು ಮೂಡಿತು. ಅವರು ಅದನ್ನು ಸತ್ಯಾಗ್ರಹದ ಪಥದಲ್ಲಿ ಹಂತಹಂತವಾಗಿ ರೂಪಿಸಿದರು. ಗಾಂಧೀಜಿಯವರು ಆಗಸ್ಟ್ 1, 1920 ರಂದು ಈ ಚಳುವಳಿಯನ್ನು ಘೋಷಿಸಿದಾಗ ಉಡುಪಿಯ ನಾಯಕರು ಅಜ್ಜರಕಾಡಿನ ಬಂಡೆಗಳ ಮೇಲೆ ಸಮಲೋಚನಾ ಸಭೆಗಳನ್ನು ಹಾಗೂ ಭಾಷಣಗಳನ್ನು ಆಯೋಜಿಸಿ ಚಳುವಳಿಯ ರೂಪುರೇಷೆಗಳನ್ನು ಜನರಿಗೆ ತಲುಪಿಸಿದರು.
ಆರ್.ಎಸ್.ಶೆಣೈ, ಸಾಂತ್ಯಾರು ಅನಂತ ಪದ್ಮನಾಭ ಭಟ್, ತೋನ್ಸೆ ಮುಕುಂದ ಪೈ ಮುಂತಾದವರ ನೇತೃತ್ವದಲ್ಲಿ ಉಡುಪಿಯ ಮುಕುಂದ ನಿವಾಸದಲ್ಲಿ ಸಭೆಗಳು ನಡೆಯುತ್ತಿದ್ದವು. ಉಡುಪಿಯಲ್ಲಿ ಉತ್ಸಾಹೀ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಬಹಿಷ್ಕರಿಸಿದರು. ಅಂತಹ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಶಾಲೆಗಳು ತೆರೆಯಲ್ಪಟ್ಟವು. ಉಡುಪಿಯ ವಕೀಲರು ಕೂಡಾ ಕೋರ್ಟಗಳನ್ನು ಬಹಿಷ್ಕರಿಸಿ ಬ್ರಿಟಿಷರ ಕಾನೂನುಗಳಿಗೆ ತಲೆಬಾಗಲಾರೆವೆಂದು ಘೋಷಿಸಿದರು. ವಿದೇಶಿ ವಸ್ತುಗಳನ್ನು ಉಪಯೋಗಿಸದೇ ಸ್ವದೇಶಿ ವಸ್ತುಗಳನ್ನು ಉಪಯೋಗಿಸುವ ಪ್ರತಿಜ್ಞೆಯನ್ನು ಹಲವರು ಕೈಗೊಂಡಿದ್ದರು.
1930 ರಲ್ಲಿ ಉಡುಪಿಯು ಉಪ್ಪಿನ ಸತ್ಯಾಗ್ರಹಕ್ಕೆ ಸಾಕ್ಷಿಯಾಯಿತು. ಏಪ್ರಿಲ್ 13 ರಂದು ಉಡುಪಿಯಲ್ಲಿ ಬಹುದೊಡ್ಡ ಸತ್ಯಾಗ್ರಹ ಕಾರ್ಯಕ್ರಮವು ಆಯೋಜಿತವಾಗಿತ್ತು. ಉಡುಪಿಯ ರಥಬೀದಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿ ಸತ್ಯಾಗ್ರಹದಲ್ಲಿ ಭಾಗವಹಿಸುವ ಉತ್ಸಾಹದಲ್ಲಿದ್ದರು. ದೇಶಭಕ್ತಿಯ ಭಾಷಣಗಳು ,ಉಪ್ಪಿನ ಸತ್ಯಾಗ್ರಹ ನಿಯಮಗಳ ಬಗ್ಗೆ ಮಾಹಿತಿ ಹಾಗೂ ದೇಶಭಕ್ತಿಯ ಘೋಷಣೆಗಳ ಬಳಿಕ ಸರ್ವಧರ್ಮಗಳ ಮುಖಂಡರುಗಳು ಹಾಗೂ ಜನತೆ ಯಾವುದೇ ಬೇಧಭಾವವಿಲ್ಲದೆ ಮಲ್ಪೆಯ ಒಡಬಾಂಡೇಶ್ವರ ಕಡಲಕಿನಾರೆಯತ್ತ ನಡಿಗೆಯನ್ನು ಆರಂಭಿಸಿದರು.
ದಾರಿಯುದ್ದಕ್ಕೂ ದೇಶಭಕ್ತಿಗೀತೆಗಳನ್ನು ಸತ್ಯಾಗ್ರಹದ ಘೋಷವಾಕ್ಯಗಳನ್ನು ಮೊಳಗಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಮಲ್ಪೆಯ ಬಲರಾಮ ದೇವಸ್ಥಾನದ ಮುಂಭಾಗವನ್ನು ತಲುಪಿದರು. ಜನರೆಲ್ಲರೂ ಅವರವರು ತಂದಿದ್ದ ಪಾತ್ರೆಗಳನ್ನು, ಕಟ್ಟಿಗೆಗಳನ್ನು ಹಿಡಿದುಕೊಂಡು ಮಲ್ಪೆಯ ಕಡಲಕಿನಾರೆಯ ಬಳಿಯ ತೋಟಗಳಲ್ಲಿ ಒಲೆಗಳನ್ನು ಹಾಕಿ ಸಮುದ್ರದ ನೀರನ್ನು ತಂದು ಉಪ್ಪನ್ನು ತಯಾರಿಸಿದರು. ಹೀಗೆ ತಯಾರಿಸಿದ ಉಪ್ಪನ್ನು ಬಹಳ ಗೌರವದಿಂದ ಮೆರವಣಿಗೆಯ ಮೂಲಕ ಉಡುಪಿಯ ಪೇಟೆಗೆ ತಂದು ಹರಾಜು ಹಾಕಿ ಬ್ರಿಟಿಷರು ಮಾಡಿದ್ದ ಕಾನೂನನ್ನು ಮುರಿದರು.
ಆ ಸಂದರ್ಭದಲ್ಲಿ ಪೋಲಿಸರಿಂದ ಲಾಟಿ ಏಟನ್ನು ತಿಂದು ಜೈಲು ಪಾಲದ ಸತ್ಯಾಗ್ರಹಿಗಳು ಅನೇಕರಿದ್ದರು.ಈ ಚಳುವಳಿಯು ಕಡಲಕಿನಾರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆದಿತ್ತು.ಇದೇ ರೀತಿ ಮುಂದೆ 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯಿತು. ಆವಾಗಲೂ ಬ್ರಿಟಿಷರು ತ್ರಿವರ್ಣ ಧ್ವಜವನ್ನು ಹಾರಿಸಲು ಬಿಡುತ್ತಿರಲಿಲ್ಲ. ಧ್ವಜವನ್ನು ಸಾರ್ವಜನಿಕವಾಗಿ ಹಾರಿಸಿದವರ ಮೇಲೆ ಅಮಾನವಿಯವಾಗಿ ದಬ್ಬಾಳಿಕೆ ನಡೆಸುತ್ತಿದ್ದರು. ಇದನ್ನು ಖಂಡಿಸಿ ಉಡುಪಿಯ ತರುಣರ ಗುಂಪೊಂದು ಯು.ಎಸ್.ಪಣಿಯಾಡಿಯವರ ನೇತೃತ್ವದಲ್ಲಿ ಉಡುಪಿಯ ಅತ್ಯಂತ ಪ್ರಮುಖವಾದ ಸ್ಥಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಪ್ರತಿಜ್ಞೆಯನ್ನು ಮಾಡಿದರು. ಆ ಪ್ರಕಾರ ಆಗಸ್ಟ್ 2 ನೇ ವಾರದಲ್ಲಿ ಉಡುಪಿಯ ರಥಬೀದಿಯಲ್ಲಿ ಬಲವಾದ ಪೋಲೀಸ್ ಸರ್ಪಗಾವಲಿದ್ದರೂ ಯು.ಶೇಷ ಶೇರಿಗಾರ್ ಎಂಬುವವರು ಮಧ್ಯರಾತ್ರಿಯ ಹೊತ್ತು ಅನಂತೇಶ್ವರ ದೇವಸ್ಥಾನದ 40 ಅಡಿ ಎತ್ತರದ ಮಾನಸ್ಥಂಬದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಮೂಲಕ ಉಡುಪಿಯು ಬ್ರಿಟಿಷರಿಗೆ ಧ್ವಜದ ಮೂಲಕ ಸವಾಲನ್ನು ಎಸೆಯಿತು.
ಪ್ರಥಮ ಸ್ವಾತಂತ್ರ್ಯ ದಿನಾಚರಣೆಯು 1947 ಆಗಸ್ಟ್ 14 ರ ಮಧ್ಯರಾತ್ರಿ ರಥಬೀದಿಯಲ್ಲಿ ಜರುಗಿತು.ಆ ದಿನ ಸಂಜೆ ಸ್ವರಾಜ್ಯ ವಿಜಯ ಎಂಬ ತಾಳಮದ್ದಳೆ ಕಾರ್ಯಕ್ರಮವು ಆಯೋಜಿತವಾಗಿತ್ತು. ಆ ತಾಳಮದ್ದಳೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಪ್ರಸ್ತುತಪಡಿಸಿ ಚಳುವಳಿಯ ಮಹತ್ವವನ್ನು ಜನರ ಮುಂದಿಟ್ಟರು. ಎಲ್ಲಾ ಧರ್ಮಗಳ ಧರ್ಮಗುರುಗಳು ಹಾಗೂ ಜನತೆ ಅಷ್ಟಮಟಗಳ ಸ್ವಾಮೀಜಿಗಳ ಜೊತೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂಭ್ರಮದಲ್ಲಿ ಭಾಗಿಗಳಾದರು. ಮರುದಿನ ಅಗಸ್ಟ್ 15 ರಂದು ಮುಂಜಾನೆ ರಥಬೀದಿಯಿಂದ ಮೆರವಣಿಗೆ ಮೂಲಕ ಅಜ್ಜರಕಾಡು ಗಾಂಧಿ ಮೈದಾನಕ್ಕೆ ಪ್ರಭಾತಫೇರಿ ಮೂಲಕ ಹೊರಟು ಅಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ಮನೋರಮಾ ಬಾಯಿಯವರಿಂದ ಧ್ವಜಾರೋಹಣವು ನೆರವೇರಿತು.ಆ ದಿನ ಸಂಜೆ ಪುರಪ್ರಮುಖರೆಲ್ಲರೂ ಒಟ್ಟಾಗಿ ಜನರಿಗೆ ಸ್ವಾತಂತ್ರ್ಯ ಹಾಗೂ ಸಹಬಾಳ್ವೆಯ ಸಂದೇಶವನ್ನು ನೀಡಿದರು.ಜನರೆಲ್ಲರೂ ಭಾರತವು ಸ್ವತಂತ್ರವಾಯಿತೆಂದು ಸಂಭ್ರಮಿಸಿದರು.
ಉಡುಪಿಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ನೆನಪೆಂದರೆ ಗಾಂಧೀಜಿಯ ಉಡುಪಿ ಭೇಟಿ. 1934 ಫೆಬ್ರವರಿ 25 ರಂದು ಗಾಂಧೀಜಿಯವರು ಅಜ್ಜರಕಾಡಿನಲ್ಲಿ 6000 ಜನ ಸೇರಿದ್ದ ಸಭೆಯನ್ನುದ್ದೇಶಿಸಿ ಸಂದೇಶ ನೀಡಿದರು. ಅವಿಭಜಿತ ದಕ್ಷಿಣ ಕನ್ನಡಕ್ಕೆ ಗಾಂಧೀಜಿಯವರ ಕೊನೆಯ ಬೇಟಿಯಾಗಿತ್ತು ಅದು. ಹೀಗೆ ಉಡುಪಿಯಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು ಇಂದಿಗೂ ಜೀವಂತವಾಗಿ ಉಳಿದಿದೆ.
ವಿಶೇಷ ಲೇಖನ : ರಿಯಾನ ಬೆಳಪು
ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ,
ಎಂಜಿಎಮ್ ಕಾಲೇಜು ,ಉಡುಪಿ