ಮಂಗಳೂರು, ಆ 14 (DaijioworldNews/HR): ಸರ್ವರಿಗೂ ಭಾರತದ ಸ್ವಾತಂತ್ರ್ಯ ದಿನದ ಅಮೃತೋತ್ಸವದ ಶುಭಾಶಯಗಳು. ನಾವು ಭಾರತೀಯರು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ಈ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮವರು ಹೋರಾಡಿ, ಜೀವದ ಬಲಿದಾನವನ್ನು ಅರ್ಪಿಸಿ ಪಡೆದ ಸ್ವಾತಂತ್ರ್ಯವಿದು. ಅವರ ತ್ಯಾಗ ಹಾಗೂ ಬಲಿದಾನದ ಫಲವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನನ್ನ ದೇಶದ ಸ್ವಾತಂತ್ರ್ಯ ಹೋರಾಟಗಾರರೆಲ್ಲರಿಗೆ ನನ್ನ ನಮನಗಳು ಹಾಗೂ ಅವರೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ ಎಂದು ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಶಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿರುವ ಅವರು, ನಮ್ಮ ದೇಶ ಸ್ವತಂತ್ರ ದೇಶವಾಗಿ 75 ವರ್ಷಗಳು ಕಳೆದರೂ ಇನ್ನೂ ಕೆಲವೊಂದು ಹಿನ್ನಡೆಗಳನ್ನು ಮೆಟ್ಟಿ ನಿಂತು ನಾವು ಮುನ್ನಡೆಯಬೇಕಾಗಿದೆ. ಬಡತನದ ಸಮಸ್ಯೆ ಇನ್ನೂ ನಮ್ಮನ್ನು ಶಾಶ್ವತವಾಗಿ ಬಿಟ್ಟು ಹೋಗಿಲ್ಲ. ನಿರುದ್ಯೋಗದ ಸಮಸ್ಯೆಯು ಇನ್ನೂ ಜ್ವಲಂತವಾಗಿರುವುದು ತುಸು ಆಲೋಚಿಸಬೇಕಾದ ಸಂಗತಿಯಾಗಿದೆ. ಇಂತಹ ಪ್ರಮುಖ ಸಮಸ್ಯೆಗಳಿಂದ ಹೊರಬಂದು ನಮ್ಮ ದೇಶವು ಪ್ರಗತಿಯತ್ತ ದಾಪುಗಾಲು ಹಾಕಲೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಇನ್ನು ಶಿಕ್ಷಣ ರಂಗದಲ್ಲಿ ಮಹತ್ವದ ಕ್ರಾಂತಿಯಾದರೂ ಇನ್ನೂ ಗಣನೀಯ ಅಭಿವೃದ್ಧಿಯಾಗಬೇಕಾಗಿದೆ. ಇದರೊಂದಿಗೆ ಮನುಷ್ಯತ್ವದ ಮನೋಧರ್ಮವು ಇನ್ನಷ್ಟು ಪ್ರಭಾವಶಾಲಿಯಾಗಬೇಕಾಗಿದೆ. ಈ ದೇಶದ ರಾಷ್ಟ್ರಧ್ವಜವು ಮುಗಿಲೆತ್ತರಕ್ಕೆ ಹಾರುವಾಗ ನಮ್ಮ ಈ ದೇಶದ ವಿವಿಧತೆಯಲ್ಲಿ ಏಕತೆ ಎಂಬಂತಹ ಸುಂದರ ನಿಲುವಿಗೆ ಇನ್ನೂ ಆನೆ ಬಲ ಬರದೇ ಇರುವುದು ತುಸು ಬೇಸರವನ್ನು ತರಿಸುತ್ತದೆ. ಧರ್ಮದ ಹೆಸರಿನಲ್ಲಿ ಆಗುವಂತಹ ಘರ್ಷಣೆ ಹಾಗೂ ತಾರತಮ್ಯ ಖಂಡಿತವಾಗಿಯೂ ನಿಲ್ಲಬೇಕಾಗಿದೆ. ಅದರ ಬದಲು ಬಂಧುತ್ವವನ್ನು ಬೆಳೆಸಲು ನಾವೆಲ್ಲರೂ ನಿರಂತರ ದುಡಿಯಬೇಕಾಗಿದೆ ಎಂದರು.
ಪ್ರತಿಯೊಬ್ಬರ ಅನನ್ಯ ಕೊಡುಗೆ ಇದ್ದಾಗ ಮಾತ್ರ ನಾವು ನಮ್ಮ ದೇಶದ ಸ್ವಾತಂತ್ರ್ಯದ ಶತಮಾನೋತ್ಸವದತ್ತ ಮುಖ ಮಾಡಬಹುದು. ಮುಂದಿನ 25 ವರ್ಷಗಳಲ್ಲಿ ನವೀನತೆಯ ಮೆಟ್ಟಿಲುಗಳನ್ನು ಏರಬಹುದು ಎನ್ನುವ ಆಶಯ ಪ್ರತಿಯೊಬ್ಬ ಭಾರತೀಯ ಪ್ರಜೆಯದಾಗಬೇಕಾಗಿದೆ. ಎಲ್ಲೆಲ್ಲೂ ಶಾಂತಿ, ನೆಮ್ಮದಿ, ದೇಶಪ್ರೇಮದ ವಾತಾವರಣ ನೆಲೆಸಲಿ. ಕೈ ಕೈ ಜೋಡಿಸಿ ನವಭಾರತವನ್ನು ಮತ್ತಷ್ಟು ಭದ್ರಗೊಳಿಸುವ ನಮ್ಮ ಕನಸಿಗೆ ಬಲ ಸಿಗಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ ಎಂದು ಹೇಳಿದ್ದಾರೆ.